ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಬಂಟ್ವಾಳ ತಾಲೂಕಿನಲ್ಲಿ ಉಂಟುಮಾಡಿರುವ ಆತಂಕದ ಪರಿಸ್ಥಿತಿಗಿಂತಲೂ ಅಗತ್ಯ ಸಾಮಾಗ್ರಿಗಳ ಕೃತಕ ಅಭಾವ ಹಾಗೂ ಸಾಮಾಗ್ರಿಗಳ ದುಬಾರಿ ಬೆಲೆ ಜನರನ್ನು ಕಂಗಾಲಾಗುವಂತೆ ಮಾಡಿದೆ ಎಂದು ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಲಾಕ್‍ಡೌನ್ ಪರಿಣಾಮದಿಂದ ಮೊದಲೇ ಜನ ವ್ಯಾಪಾರ-ವಹಿವಾಟುಗಳಿಲ್ಲದೆ, ಸಂಪತ್ತಿನ ಕ್ರೋಢೀಕರಣ ಇಲ್ಲದೆ ಇದ್ದುದರಲ್ಲಿ ತೃಪ್ತಿಪಟ್ಟು ಜೀವಿಸುವ ಸಂಧಿಗ್ಧ ಪರಿಸ್ಥಿತಿಯಲ್ಲಿರುವ ಸನ್ನಿವೇಶದಲ್ಲಿ ತಾಲೂಕಿನ ರೇಶನ್ ಮೊದಲಾದ ಅಗತ್ಯ ಸಾಮಾಗ್ರಿಗಳ ಅಂಗಡಿ ಮಾಲಕರು ಜನರ ಅನಿವಾರ್ಯತೆಯನ್ನೇ ಬಂಡವಾಳವಾಗಿಸಿಕೊಂಡು ಜನರನ್ನು ಇನ್ನಿಲ್ಲದಂತೆ ಪೀಡಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದೆ ಎಂದಿದ್ದಾರೆ.
ಸಂಪೂರ್ಣ ಸ್ತಬ್ದತೆ ಇದ್ದ ಮೂರು ದಿನಗಳ ಬಳಿಕ ಜನರ ಅಗತ್ಯ ಸಾಮಾಗ್ರಿ ಖರೀದಿಗೆ ಜಿಲ್ಲಾಡಳಿತ ಅನುಮತಿ ನೀಡಿದ ದಿನಗಳ ಮುನ್ನಾ ದಿನ ಸ್ವತಃ ತಾಲೂಕಾಡಳಿತ, ಜಿಲ್ಲಾಡಳಿ, ಅಧಿಕಾರಿಗಳ ಸುಪರ್ದಿಯಲ್ಲೇ ಬಹುತೇಕ ಅಂಗಡಿಗಳಿಗೆ ಸಾಮಾಗ್ರಿ ತುಂಬಿಸಲು ಅವಕಾಶ ನೀಡಿ ಜನತೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರೂ ಅಂಗಡಿ ಮಾಲಕರು ಮಾತ್ರ ಗೋಡೌನ್‍ಗಳಲ್ಲಿ ಸಾಕಷ್ಟು ಸಾಮಾಗ್ರಿಗಳನ್ನು ಇಟ್ಟುಕೊಂಡಿದ್ದರೂ ಕೆಲವೊಂದು ಲಾಭಗಳಿಸುವ ಉದ್ದೇಶಗಳನ್ನಿಟ್ಟುಕೊಂಡು ಕೃತಕ ಅಭಾವವನ್ನು ಜನರ ಮುಂದೆ ತೋರ್ಪಡಿಸಿ ಸಾಮಾಗ್ರಿಗಳನ್ನು ನೀಡುವಲ್ಲಿ ಹಿಂದೇಟು ಹಾಕಿದ್ದಾರೆ. ಅಲ್ಲದೆ ಅಗತ್ಯ ಸಾಮಾಗ್ರಿಗಳಿಗೆ ಮಿತಿ ಮೀರಿದ ಲೆಕ್ಕದಲ್ಲಿ ದುಬಾರಿ ದರ ವಿಧಿಸುವ ಮೂಲಕ ಅಕ್ಷರಶಃ ಜನರನ್ನು ಸಂಕಷ್ಟರ ಪರಿಸ್ಥಿತಿಯಲ್ಲೂ ದೋಚುವ ಮನೋಸ್ಥಿತಿ ತೋರಿದ್ದಾರೆ ಎಂದು ಜನ ಗಂಭೀರವಾಗಿ ಆರೋಪಿಸುತ್ತಿದ್ದಾರೆ ಎಂದು ಅಬೂಬಕ್ಕರ್ ಸಿದ್ದೀಕ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು, ಪ್ರತಿ ತಾಲೂಕುಗಳ ತಹಶೀಲ್ದಾರರರುಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರುಗಳು ಕೃತಕ ಅಭಾವ ಸೃಷ್ಟಿಸುವ ಬಗ್ಗೆ ಹಾಗೂ ದುಬಾರಿ ದರ ವಿಧಿಸುವ ಬಗ್ಗೆ ಪದೇ ಪದೇ ಘೋಷಣೆಗಳು, ಪತ್ರಿಕಾ ಹೇಳಿಕೆಗಳನ್ನು, ಆದೇಶಗಳನ್ನು ನೀಡುತ್ತಿದ್ದರೂ ಇಂತಹ ಕೃತಕ ಅಭಾವ ಸೃಷ್ಟಿ ದುಬಾರಿ ದರ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಜರುಗುವ ಕನಿಷ್ಠ ಭರವಸೆಗಳೂ ದೊರೆಯುತ್ತಿಲ್ಲ. ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ವ್ಯಾಪಾರಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಸಂಧಿಗ್ಧ ಪರಿಸ್ಥಿತಿಯಲ್ಲಿರುವ ಜನರ ನೆರವಿಗೆ ಬರುವಂತೆ ಅಬೂಬಕ್ಕರ್ ಸಿದ್ದೀಕ್ ಆಗ್ರಹಿಸಿದ್ದಾರೆ.
0 comments:
Post a Comment