ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಮೂಲದ ಸುಮಾರು 75 ವರ್ಷದ ಮಹಿಳೆಯು ಕೊರೋನ ಸೋಂಕು ಪೀಡಿತರಾಗಿ ಮೃತಪಟ್ಟಿದ್ದು, ಆ ಮಹಿಳೆಯ ಮೃತ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಪಚ್ಚನಾಡಿ ಹಾಗೂ ಮೂಡುಶೆಡ್ಡೆಯ ಹಿಂದೂ ರುಧ್ರಭೂಮಿಗೆ ಕೊಂಡುಹೋದ ಸಂಧರ್ಭದಲ್ಲಿ ಸ್ಥಳೀಯ ಶಾಸಕದ್ವಯರು ತಮ್ಮ ಬೆಂಬಲಿಗರೊಂದಿಗೆ ಸೇರಿಕೊಂಡು ಅಡ್ಡಿಪಡಿಸಿರುವುದು ಮಾನವ ಸಮುದಾಯಕ್ಕೆ ಮಾತ್ರವಲ್ಲ ಒಂದು ಹಿರಿಯ ಮಹಿಳೆಯ ಪಾರ್ಥಿವ ಶರೀರಕ್ಕೆ ಮಾಡಿದ ಘೋರ ಅವಮಾನವಾಗಿದೆ. ಈ ಕೃತ್ಯವನ್ನು ತೀಕ್ಷ್ಣವಾಗಿ ಖಂಡಿಸುವುದಾಗಿ ಜಿಲ್ಲಾ ವಕ್ಫ್ ಇಲಾಖೆಯ ನಿಕಟಪೂರ್ವ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ತಿಳಿಸಿದ್ದಾರೆ.
ಮಹಿಳೆಯು ಮೃತಪಟ್ಟ ರಾತ್ರಿ ಸುಮಾರು 11 ಗಂಟೆಗೆ ನನ್ನ ಹಿತೈಷಿಯೊಬ್ಬರು ಕರೆಮಾಡಿ ಮಹಿಳೆಯು ಮೃತಪಟ್ಟಿರುವುದಾಗಿಯೂ ಮೃತ ಮಹಿಳೆಯ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕೆ ಜಿಲ್ಲೆಯ ಎರಡು ಶಾಸಕರುಗಳು ಅಡ್ಡಿಪಡಿಸುತ್ತಿರುವುದರಿಂದ ಪಾರ್ಥಿವ ಶರೀರವನ್ನು ಸಜೀಪನಡು ಕಂಚಿನಡ್ಕಪದವಿನಲ್ಲಿರುವ ಹಿಂದೂ ರುಧ್ರಭೂಮಿಯಲ್ಲಿ ತಂದು ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುವುದು ಎಂಬ ಮಾಹಿತಿ ನೀಡಿದರು. ಕೂಡಲೇ ನಾನು ನಮ್ಮ ಊರಿನ ನಾಗರಿಕರೆಲ್ಲರಿಗೂ ಸುದ್ದಿಯನ್ನು ಮುಟ್ಟಿಸಿ ನಾವೆಲ್ಲರೂ ಆ ಮೃತ ಮಹಿಳೆಯ ಪಾರ್ಥಿವ ಶರೀರವು ನಮ್ಮ ಊರಾದ ಸಜಿಪನಡುವಿಗೆ ಪ್ರವೇಶಿಸುವಾಗ ಪ್ರೀತಿ ಹಾಗೂ ಗೌರವದಿಂದ ಸ್ವಾಗತಿಸಲು ಸಿದ್ದರಾಗಿದ್ದೆವು. ಬಳಿಕ ಬಂದ ಸಂದೇಶವು ಬಿ.ಸಿ.ರೋಡಿನ ಕೈಕುಂಜೆಯ ಹಿಂದೂ ರುಧ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲು ಸಿದ್ದತೆಗಳು ನಡೆಯುತ್ತಿದೆ ಎಂಬುದಾಗಿತ್ತು ಎಂದ ಅಬೂಬಕ್ಕರ್ ಮಾನವೀಯತೆಯಿಲ್ಲದ ನಾಡಿನಲ್ಲಿ ಮೃತಪಟ್ಟಂತಹಾ ಯಾವುದೇ ಜಾತಿ-ಧರ್ಮದ ಪಾರ್ಥಿವ ಶರೀರಗಳನ್ನು ಅಂತ್ಯಸಂಸ್ಕಾರ ಮಾಡಲು ಅಡ್ಡಿಪಡಿಸುವಂತಹಾ ಪ್ರಸಂಗವೇರ್ಪಟ್ಟರೆ ನಮ್ಮ ಸಜಿಪನಡು ಗ್ರಾಮಕ್ಕೆ ತಂದರೆ ಸಜಿಪನಡು ಗ್ರಾಮದ ಸರ್ವ ನಾಗರಿಕರು ಗೌರವಾದರಗಳಿಂದ ಸ್ವಾಗತಿಸಿ ಪಾರ್ಥಿವ ಶರೀರಕ್ಕೆ ನೀಡಬೇಕಾದ ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲು ನಾವು ಸಿದ್ದರಾಗಿದ್ದೇವೆ ಎಂದಿದ್ದಾರೆ.
ಹಿರಿಯ ಜೀವದ ಪಾರ್ಥಿವ ಶರೀರಕ್ಕೆ ಅವಮಾನ ಮಾಡಿದ ಜಿಲ್ಲೆಯ ಶಾಸಕದ್ವಯರು ಹಾಗೂ ಅವರ ಬೆಂಬಲಿಗರ ಮೇಲೆ ಜಿಲ್ಲಾಡಳಿತ ತಕ್ಷಣ ಕಠಿಣ ಕ್ರಮ ಜರುಗಿಸಬೇಕು ಎಂದು ಅಬೂಬಕ್ಕರ್ ಸಜಿಪ ಆಗ್ರಹಿಸಿದ್ದಾರೆ.
0 comments:
Post a Comment