ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಜೀವ ಬಲಿಯಾಗಿದೆ. ಉಸಿರಾಟದ ತೊಂದರೆ ಎಂದು ಮಂಗಳೂರಿನ ಕೊರೋನಾ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಭಾನುವಾರ ಸಾವನ್ನಪ್ಪಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಶನಿವಾರ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಕೊರೊನಾ ರೋಗದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಬಳಿಕ ರೋಗಿಯ ಗಂಟಲು ದ್ರವ ಮತ್ತು ಬ್ಲಡ್‍ನ್ನು ಶನಿವಾರವೇ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಮಹಿಳೆ ಸಾವನ್ನಪ್ಪಿದ್ದು, ಇದೀಗ ಬಂದ ವರದಿಯಲ್ಲೂ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಮಾರಕ ವೈರಸ್‍ಗೆ ಮೊದಲ ಬಲಿಯಾಗಿದ್ದು, ಕರ್ನಾಟಕದಲ್ಲಿ ಮೃತರ ಸಂಖ್ಯೆ 16ಕ್ಕೇರಿದಂತಾಗಿದೆ.
ಮಹಿಳೆಯ ಸಾವು ಕೊರೋನಾ ಪಾಸಿಟಿವ್ ಮೂಲಕ ಎಂಬ ವರದಿ ಬರುತ್ತಿದ್ದಂತೆ ಬಂಟ್ವಾಳ ಪೇಟೆಯನ್ನು ಪೊಲೀಸರು ಸೀಲ್‍ಡೌನ್ ಮಾಡಿ ಘೋಷಣೆ ಮಾಡಿದ್ದಾರೆ. ಬಂಟ್ವಾಳ ಪೇಟೆಯಿಂದ ಯಾರೂ ಹೊರ ಬಾರದಂತೆ ಹಾಗೂ ಪೇಟೆಯೊಳಗೆ ಯಾರೂ ಬರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಧ್ವನಿವರ್ದಕ ಮೂಲಕ ಪೊಲೀಸರು ಜನತೆಗೆ ಜಾಗೃತಿ ಮೂಡಿಸುತ್ತಿದ್ದಾರೆ.
0 comments:
Post a Comment