ಮಂಗಳೂರು (ಕರಾವಳಿ ಟೈಮ್ಸ್) : ಪ್ರತಿವರ್ಷ ಆಡಳಿತದಲ್ಲಿರುವ ಸರಕಾರದ ಹಣಕಾಸು ಮಂತ್ರಿ ಬಜೆಟ್ ಮಂಡಿಸುವ ಕ್ರಮವಿದೆ ಎಂದುಕೊಂಡು ಸಂಪ್ರದಾಯದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿ ಬಜೆಟ್ ಮಂಡಿಸಿದ್ದಾರೆಯೇ ಹೊರತು, ಸದ್ರಿ ಈ ಬಾರಿಯ ಬಜೆಟ್‍ಗೆ ಯಾವುದೇ ರೀತಿಯ ಗೊತ್ತು-ಗುರಿಯೇ ಇಲ್ಲ ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ರಾಜ್ಯ ಬಜೆಟ್ ಬಗ್ಗೆ ಕಟು ಟೀಕೆ ಮಾಡಿದ್ದಾರೆ.
ಯಾವುದೇ ಗುರಿಯಿಲ್ಲ, ದೂರದೃಷ್ಟಿಯೂ ಇಲ್ಲದ ಬಜೆಟ್ ಈ ಬಾರಿ ಮಂಡನೆಯಾಗಿದೆ. ಈ ಹಿಂದಿನ ಸರಕಾರಗಳ ಯೋಜನೆಗಳನ್ನು ಉಳಿಸಿಕೊಳ್ಳುವ, ಮುಂದುವರಿಸುವ ಬಗ್ಗೆ ಈಗಿನ ಸರಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ. ಆ ಎಲ್ಲಾ ಯೋಜನೆಗಳಿಗೆ ಯಾವುದೇ ಅನುದಾನದ ಘೋಷಣೆಯೂ ಆಗಿಲ್ಲ. ಕನಿಷ್ಠ ಪಕ್ಷ ಬಡವರ ಹೊಟ್ಟೆ ತುಂಬಿಸುತ್ತಿರುವ ಇಂದಿರಾ ಕ್ಯಾಂಟೀನ್ ಗಳ ಬಗ್ಗೆಯೂ ಸರಕಾರ ಬಜೆಟಿನಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರಲು ವಿಫಲವಾಗಿದೆ ಎಂದು ಟೀಕಿಸಿರುವ ಖಾದರ್ ನೀರಾವರಿ ಯೋಜನೆಗಳ ಬಗ್ಗೆಯೂ ಯಡಿಯೂರಪ್ಪ ಬಜೆಟ್ ಯಾವುದೇ ಘೋಷಣೆ ಮಾಡಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ದಿ ಯೋಜನೆಗಳನ್ನೇ ಕೈಬಿಟ್ಟಿದ್ದಾರೆ. ಜನರಿಗೆ ಯಾವುದೇ ಪ್ರಯೋಜನವಿಲ್ಲದ, ಸ್ಪಷ್ಟತೆ ಇಲ್ಲದ ಕಾಟಾಚಾರದ ಬಜೆಟ್ ಇದಾಗಿದ್ದಾರೆ ಎಂದು ಯು ಟಿ ಖಾದರ್ ದೂರಿದ್ದಾರೆ.
0 comments:
Post a Comment