ಹಿಂದೂ ಮೃತದೇಹದ ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು - Karavali Times ಹಿಂದೂ ಮೃತದೇಹದ ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು - Karavali Times

728x90

30 March 2020

ಹಿಂದೂ ಮೃತದೇಹದ ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು



ರಾಮ ನಾಮ ಜಪಿಸಿಕೊಂಡೇ ಕ್ರಿಯೆ ಮುಗಿಸಿದರು 

ಸ್ವಸಮುದಾಯದವರು ಮುಂದೆ ಬರದಿದ್ದಾಗ ಮುಂದೆ ನಿಂತು ಜವಾಬ್ದಾರಿ ನಿಭಾಯಿಸಿದ ಸಹೋದರ ಧರ್ಮೀಯರು 


ಲಕ್ನೋ (ಕರಾವಳಿ ಟೈಮ್ಸ್) : ಕೊರೊನಾ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ಲಾಕ್‍ಡೌನ್‍ನಿಂದಾಗಿ ಜೀವಂತ ವ್ಯಕ್ತಿಗಳೇ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಮಧ್ಯೆ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದಕ್ಕೂ ಜನ ಹಿಂದೆ-ಮುಂದೆ ನೋಡುವಂತಾಗಿದೆ. ಇಂತಹದೇ ಘಟನೆಯೊಂದಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಉತ್ತರ ಪ್ರದೇಶದಲ್ಲಿ ಮೃತಪಟ್ಟ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಸ್ವಸಮುದಾಯದವರ ಹಿಂಜರಿಕೆಯಿಂದಾಗಿ ಸಹೋದರ ಧರ್ಮೀಯರಾದ ಮುಸ್ಲಿಮರು ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಬುಲಂದ್‍ಶಹರ್‍ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಆನಂದ ವಿಹಾರ ಪ್ರದೇಶದ ನಿವಾಸಿ ರವಿ ಶಂಕರ್ (40) ಕ್ಯಾನ್ಸರ್ ರೋಗದಿಂದ ಶನಿವಾರ ಮಧ್ಯಾಹ್ನ ತನ್ನ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಲಾಕ್‍ಡೌನ್ ಆದ ಕಾರಣ ಸಂಬಂಧಿಕರು ಅಂತ್ಯಕ್ತಿಯೆಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಪತ್ನಿ ಅಂತ್ಯಸಂಸ್ಕಾರ ಹೇಗೆ ಮಾಡುವುದು ಎಂದು ಆತಂಕಗೊಂಡು ದುಃಖಿತರಾಗಿದ್ದರು. ಈ ವೇಳೆ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ನೆರೆಹೊರೆಯ ಮುಸ್ಲಿಮರು ಧಾವಿಸಿದ್ದಾರೆ. ಅಲ್ಲದೇ ಮುಸ್ಲಿಮರು ಹಿಂದೂ ಘೋಷವಾಕ್ಯಗಳನ್ನು ಪಠಿಸುತ್ತ ವ್ಯಕ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ.

ಹಿಂದೂ ವ್ಯಕ್ತಿಯ ಮೃತದೇಹವನ್ನು ಮುಸ್ಲಿಮರು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುತ್ತಾ ‘ರಾಮ ನಾಮ ಸತ್ಯ ಹೇ’ ಎಂದು ಕೂಗುತ್ತಾ ಸಾಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮುಸ್ಲಿಮರ ಸಹೋದರತೆಗೆ ಅನೇಕರು ಧನ್ಯವಾದ ತಿಳಿಸುತ್ತಿದ್ದಾರೆ. “ಸ್ಥಳೀಯ ಜನರೆಲ್ಲರೂ ರವಿ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು. ಎರಡು ಸಮುದಾಯ ಮೊದಲಿನಿಂದಲೂ ಪರಸ್ಪರರಿಗೆ ನೆರವಾಗುತ್ತ ಉತ್ತಮ ಸಂಬಂಧ ಹೊಂದಿದ್ದೇವೆ” ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಜುಬೈದ್ ತಿಳಿಸುತ್ತಾರೆ. ಮೃತರು  ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಹಿಂದೂ ಮೃತದೇಹದ ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು Rating: 5 Reviewed By: karavali Times
Scroll to Top