ಮೆಲ್ಬೋರ್ನ್ (ಕರಾವಳಿ ಟೈಮ್ಸ್) : ಕ್ರಿಕೆಟ್ ಕ್ರೀಡೆಯ ಆತ್ಮವೆಂದೇ ಕರೆಯುವ ಟೆಸ್ಟ್ ಕ್ರಿಕೆಟ್ ಜನ್ಮ ತಾಳಿ 143 ವರ್ಷಗಳೇ ಸಂದುತ್ತಿವೆ. 1877ರ ಮಾ 15 ರಂದು ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆದಿದ್ದು, ವಿಶ್ವದ ಅಧಿಕೃತ ಮೊದಲನೇ ಟೆಸ್ಟ್ ಪಂದ್ಯ ಇದಾಗಿತ್ತು.
ಅಂದಿನ ಇಂಗ್ಲೆಂಡ್ ತಂಡವನ್ನು ಜೇಮ್ಸ್ ಲಿಲ್ಲಿ ಮುನ್ನಡೆಸಿದ್ದರು. 1877 ರ ಸರಣಿಗೆ ಮುಂಚಿತವಾಗಿ ಇಂಗ್ಲಿಷ್ ತಂಡಗಳು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದವು. ಆದರೆ, ಲಿಲ್ಲಿವೈಟ್ ನೇತೃತ್ವದ ತಂಡವು ಆಹ್ವಾನಕ್ಕಿಂತ ಹೆಚ್ಚಾಗಿ ಈ ತೀರಗಳಿಗೆ ವ್ಯಾಪಾರೋದ್ಯಮವಾಗಿ ಭೇಟಿ ನೀಡುತ್ತಿತ್ತು. ಉದ್ಘಾಟನಾ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 45 ರನ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಪ್ರಥಮ ಇನ್ನಿಂಗ್ಸ್‍ನಲ್ಲಿ 169.3 ಓವರ್‍ಗಳಲ್ಲಿ 245 ರನ್‍ಗಳಿಗೆ ಆಲೌಟ್ ಆಗಿತ್ತು. ಆಸೀಸ್ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ಬನ್ನೆರ್ಮನ್ 285 ಎಸೆತಗಳಿಂದ 18 ಬೌಂಡರಿಯೊಂದಿಗೆ 165 ರನ್ ಗಳಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‍ನ ಮೊದಲ ಶತಕವಾಗಿತ್ತು. ಇವರನ್ನು ಬಿಟ್ಟರೆ ಇನ್ನುಳಿದವರು ಬಹುಬೇಗ ವಿಕೆಟ್ ಒಪ್ಪಿಸಿದ್ದರು. ಇಂಗ್ಲೆಂಡ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ್ದ ಅಲ್ಫ್ರೆಡ್ ಶಾ ಹಾಗೂ ಸೌಥ್ ಎರ್ಟನ್ ತಲಾ ಮೂರು ವಿಕೆಟ್ ಕಬಳಿಸಿದ್ದರು.
ಬಳಿಕ ಪ್ರಥಮ ಇನ್ನಿಂಗ್ಸ್ ಮಾಡಿದ್ದ ಇಂಗ್ಲೆಂಡ್ ತಂಡ 136.1 ಓವರ್‍ಗಳಿಗೆ 196 ರನ್‍ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಪ್ರಥಮ ಇನ್ನಿಂಗ್ಸ್‍ನಲ್ಲಿ 49 ರನ್ ಹಿನ್ನಡೆ ಅನುಭವಿಸಿತು. ಬಿಲ್ಲಿ ಮಿಡ್ ವಿಂಟರ್ ಐದು ವಿಕೆಟ್ ಕಬಳಿಸಿದ್ದರು. ಇಂಗ್ಲೆಂಡ್ ಪರ ಹ್ಯಾರಿ ಜಪ್ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರು. 241 ಎಸೆತಗಳಲ್ಲಿ 63 ರನ್ ಗಳಿಸಿದ್ದರು. ಇವರ ಜತೆ, ಚಾರ್ಲ್ಸ್‍ವುಡ್ ಹಾಗೂ ಅಲ್ಲೆನ್ ಹಿನ್ ಕ್ರಮವಾಗಿ 36 ಮತ್ತು 35 ರನ್ ಗಳಿಸಿದ್ದರು.
49 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಅಲ್ಫ್ರೆಡ್ ಶಾ ಆಘಾತ ನೀಡಿದರು. 34 ಓವರ್‍ಗಳಿಗೆ 38 ರನ್ ನೀಡಿ ಐದು ವಿಕೆಟ್ ಕಬಳಿಸಿದ್ದರು. ಇಂಗ್ಲೆಂಡ್ ಮಾರಕ ದಾಳಿಗೆ ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟ್ಸ್‍ಮನ್ ಕೂಡ ಪುಟಿದೇಳುವಲ್ಲಿ ವಿಫಲರಾಗಿದ್ದರು. ಟಾಮ್ ಹೂರನ್ 20 ರನ್ ಗಳಿಸಿದ್ದು ಆಸೀಸ್ ಪರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಶಾಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ್ದ ಸೌಥ್ ಎರ್ಟನ್ ಮೂರು ವಿಕೆಟ್ ಕಿತ್ತಿದ್ದರು. ಬಳಿಕ 153 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ತಂಡ ಕೂಡ ದ್ವಿತೀಯ ಇನ್ನಿಂಗ್ಸ್‍ನಲ್ಲಿ ಆಸೀಸ್ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಗಿತ್ತು. ಮಾರಕ ದಾಳಿ ನಡೆಸಿದ್ದ ಟಾಮ್ ಕೆಂಡಾಲ್ ಮಾರಕ ದಾಳಿ ನಡೆಸಿ ಇಂಗ್ಲೆಂಡ್ ತಂಡದ ಪತನಕ್ಕೆ ಕಾರಣರಾಗಿದ್ದರು. ಇವರು 33.1 ಓವರ್‍ಗಳಿಗೆ 55 ರನ್ ನೀಡಿ ಪ್ರಮುಖ ಏಳು ವಿಕೆಟ್ ಕಬಳಿಸಿದ್ದರು.
ಇಂಗ್ಲೆಂಡ್ ಜಾನ್ ಸೆಲ್ಬಿ 31 ರನ್ ಹಾಗೂ ಜಾರ್ಜ್ ಉಲೆಟ್ 24 ರನ್ ಗಳಿಸಿದರು. ಇವರನ್ನು ಬಿಟ್ಟು ಇನ್ನುಳಿದವರು ಆಸೀಸ್ ದಾಳಿಗೆ ತಲೆಬಾಗಿದರು. ಒಟ್ಟಾರೆ, ಇಂಗ್ಲೆಂಡ್ ತಂಡ ದ್ವಿತೀಯ ಇನ್ನಿಂಗ್ಸ್‍ನಲ್ಲಿ 108 ರನ್ ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ 45 ರನ್‍ಗಳಿಂದ ಸೋಲು ಒಪ್ಪಿಕೊಂಡಿತ್ತು.
0 comments:
Post a Comment