ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಮತ್ತು ಈ ಸಂಬಂಧ ಅಗತ್ಯ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರವಾಗಿ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಡಿದ್ದ ಮನವಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಸೊರಬ ತಾಲೂಕಿನ ಆನವಟ್ಟಿಯ ಸಿಆರ್‍ಪಿ ರಾಜು, ತಿಮ್ಮಾಪುರ ಸರ್ಕಾರಿ ಶಾಲೆಯ ಶಿಕ್ಷಕ ಢಾಕ್ಯಾ ನಾಯ್ಕ ಅಮಾನತುಗೊಂಡವರು. ಇವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಸೋಮವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
‘ಹಲೋ ಸಿಎಂ ಸಾಹೇಬರೇ, ಸಾರ್ವಜನಿಕರಿಂದ ಹಣ ಕೇಳಿದ್ದೀರಿ. ಹಣದ ಲಿಸ್ಟ್ ಇಲ್ಲಿದೆ ನೋಡಿ’ ಎಂಬ ವಾಯ್ಸ್ ರೆಕಾರ್ಡ್ ಇರುವ ಮಾಹಿತಿ ಸಾಮಾಜಿಕ ಜಾಲತಾಣಗಳಿಗೆ ಫಾರ್ವರ್ಡ್ ಮಾಡಿದ್ದಲ್ಲದೇ, ‘ರಿಯಲಿ ರೈಟ್’ ಎಂದು ಪ್ರತಿಕ್ರಿಯಿಸಿದ್ದರು.
ಈ ಇಬ್ಬರು ಶಿಕ್ಷಕರು ಕೊರೊನಾ ನಿರ್ಬಂಧದ ಸಮಯದಲ್ಲಿ ಮನೆಯಲ್ಲೇ ಕುಳಿತು ಸರ್ಕಾರದ ಕೆಲಸಕ್ಕೆ ನೆರವಾಗುವ ಬದಲು, ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ, ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
0 comments:
Post a Comment