ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಸೋಂಕಿನ ಭಯಭೀತ ಸ್ಥಿತಿಯಲ್ಲಿ ದಿಟ್ಟತನದಿಂದ ಕೆಲಸ ಮಾಡುತ್ತಿರುವ ಮಾಧ್ಯಮ ಕ್ಷೇತ್ರದ ವರದಿಗಾರರು, ಕ್ಯಾಮೆರಾಮೆನ್‍ಗಳು ಮುದ್ರಣಾಲಯದ ಕಾರ್ಮಿಕರು, ಚಾಲಕರು, ಪತ್ರಿಕಾ ವಿತರಕರೆಲ್ಲರೂ ಅತ್ಯಂತ ಅಭಿನಂದನಾರ್ಹರು. ಮಾಧ್ಯಮ ಕ್ಷೇತ್ರ ಕೂಡಾ ಅಗತ್ಯ ಸೇವೆ ಎಂದು ಪರಿಗಣಿಸಿ ರಾಜ್ಯ ಸರಕಾರ ಇವರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.
ಕೊರೊನಾ ವೈರಸ್ ಹುಟ್ಟಿಸಿರುವ ಭೀತಿಯ ಹಿನ್ನೆಲೆಯಲ್ಲಿ ಕನ್ನಡ ಪತ್ರಿಕೆಗಳ ಸಂಪಾದಕರು ಸೇರಿ ಪತ್ರಿಕೆಗಳು ಸುರಕ್ಷಿತವಾಗಿವೆ ಎಂದು ಒಕ್ಕೊರಲಿನ ಭರವಸೆ ನೀಡಿರುವುದು ಸ್ವಾಗತಾರ್ಹ. ಈ ಮೂಲಕ ಓದುಗರ ಮನದಲ್ಲಿದ್ದ ಆತಂಕವನ್ನು ದೂರ ಮಾಡಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
0 comments:
Post a Comment