ಬೆಂಗಳೂರು (ಕರಾವಳಿ ಟೈಮ್ಸ್) : ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಜಾರಿಗೆ ತಂದಿದ್ದ ಶಾದಿ ಭಾಗ್ಯ ಯೋಜನೆ ನಿಲ್ಲಿಸಲು ಇದೀಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತೀರ್ಮಾನಿಸಿದ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದೆ.
ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಬಡ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಜಾರಿಗೆ ತರಲಾಗಿದ್ದ ಶಾದಿ ಭಾಗ್ಯ ಯೋಜನೆಗಾಗಿ ಹೊಸ ಅರ್ಜಿ ಸ್ವೀಕರಿಸಬೇಡಿ ಎಂದು ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಇದೀಗ ಆದೇಶ ಹೊರಡಿಸಿರುವುದು ಬಯಲಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದ ರಾಜ್ಯ ಬಜೆಟಿನಲ್ಲಿ ಶಾದಿ ಬಾಗ್ಯ ಯೋಜನೆಗೆ ಯಾವುದೇ ಅನುದಾನ ಮೀಸಲಿಟ್ಟಿರಲಿಲ್ಲ. ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕರ ಸಹಿತ ಸಮುದಾಯದ ಮಂದಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅಲ್ಪಸಂಖ್ಯಾತ ಸಮುದಾಯದ ಶಾಸಕರು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶವನ್ನೂ ಕೇಳಿದ್ದರು. ಈ ಮಧ್ಯೆ ಇದೀಗ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಶಾದಿಭಾಗ್ಯಕ್ಕೆ ಹೊಸ ಅರ್ಜಿ ಸ್ವೀಕರಿಸದಂತೆ ಆದೇಶ ಹೊರಡಿಸಲಾಗಿರುವುದು ಬಯಲಿಗೆ ಬಂದಿದೆ.
ಬಿದಾಯಿ ಯೋಜನೆಯಡಿ ಮದುವೆ ಖರ್ಚು, ಜೀವನಾವಶ್ಯಕ ಸಾಮಗ್ರಿ ಖರೀದಿಗೆ 50 ಸಾವಿರ ರೂಪಾಯಿ ನೀಡುವ ಶಾದಿ ಬಾಗ್ಯ ಯೋಜನೆಯನ್ನು ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿತ್ತು. ಈ ಯೋಜನೆಯಡಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಹಲವು ಮಂದಿ ಬಿಪಿಎಲ್ ಕುಟುಂಬದ ಬಡ ಹೆಣ್ಣು ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದರು.
0 comments:
Post a Comment