ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ ಹಲವು ನಿರ್ಬಂಧ ಕ್ರಮಗಳನ್ನು ಕೈಗೊಂಡಿರುವ ಕಾರಣದಿಂದ ಮಾ 16 ರಂದು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ನಡೆಸಲು ಉದ್ದೇಶಿಸಿದ್ದ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಧರಣಿ ಸತ್ಯಾಗ್ರಹ ಮುಂದೂಡಲಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ತಿಳಿಸಿದ್ದಾರೆ.
ಈ ಬಗ್ಗೆ ಬಿ ಸಿ ರೋಡಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಕೇಂದ್ರ ಮತ್ತು ರಾಜ್ಯದ ಕೆಲವು ಜನವಿರೋಧಿ ನೀತಿಗಳ ವಿರುದ್ಧ ಮಾ 16 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಕ್ಕೊತ್ತಾಯ ಮಂಡಿಸುವ ಬಗ್ಗೆ ಸಮಾನ ಮನಸ್ಕ ಸಂಘಟನೆಗಳ ಬಂಟ್ವಾಳ ತಾಲೂಕು ಸಮನ್ವಯ ಸಮಿತಿ ನಿರ್ಧಾರ ಮಾಡಿತ್ತು. ಆದರೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸುವುದನ್ನು ವಾರದ ಮಟ್ಟಿಗೆ ಮುಂದೂಡಲು ವಿನಂತಿಸಿರುವ ಹಿನ್ನೆಲೆಯಲ್ಲಿ ಹಾಗೂ ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಸತ್ಯಾಗ್ರಹವನ್ನು ಮುಂದಕ್ಕೆ ಹಾಕಲಾಗಿದೆ ಎಂದರು.
ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಮಹಮ್ಮದ್ ಶಫಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಿ ಎಂ ಅಬ್ಬಾಸ್ ಅಲಿ, ಬಿ ಶೇಖರ್, ಪ್ರಭಾಕರ ದೈವಗುಡ್ಡೆ, ಮಹಮ್ಮದ್ ನಂದಾವರ ಮೊದಲಾದವರು ಜೊತೆಗಿದ್ದರು.
0 comments:
Post a Comment