ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದಲ್ಲಿ 10 ತಿಂಗಳ ಹಸುಳೆಗೆ ಕೊರೋನ ವೈರಸ್ ದೃಢಪಟ್ಟ ನಂತರ ಗ್ರಾಮದಲ್ಲಿ ದಿಗ್ಬಂಧನ ವಿಧಿಸಲಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ಗ್ರಾಮದ ಬಡವರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಇಲ್ಲಿನ ಸಮಾಜ ಸೇವಕ ಯುವಕರಾದ ಜಸೀಂ, ಯೂಸುಫ್ ಹಾಗೂ ನಝೀರ್ ಎಂಬವರು ಮಾನವೀಯತೆ ಮೆರೆಯುತ್ತಿದ್ದಾರೆ.
ಕೊರೋನ ಸೋಂಕು ದೃಢವಾದ ಬಳಿಕ ಇಡೀ ಸಜಿಪನಡು ಗ್ರಾಮವನ್ನೇ ಕ್ವಾರಂಟೈನ್‍ನಲ್ಲಿಡಲಾಗಿದ್ದು, ಸಾರ್ವಜನಿಕರ ಒಳ-ಹೊರ ಸಂಚಾರವನ್ನೇ ನಿರ್ಬಂಧಿಸಲಾಗಿದೆ. ಇದರಿಂದಾಗಿ ಅಗತ್ಯ ಸಾಮಾಗ್ರಿಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೂ ತೀರಾ ಬಡವರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡು ಈ ಯುವಕರ ತಂಡ ಬಡವರಿಗೆ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಸುಮಾರು 30-40 ಮಂದಿಗೆ ಬೇಕಾದ ಊಟವನ್ನು ತಾವೇ ತಯಾರಿಸಿ ಬಡವರ ಮನೆಗೆ ತಲುಪಿಸುತ್ತಿದ್ದಾರೆ. ಅಲ್ಲದೇ ಕರ್ತವ್ಯದಲ್ಲಿರುವ ಪೆÇಲೀಸ್ ಸಿಬ್ಬಂದಿ ಹಾಗೂ ಗ್ರಾ.ಪಂ. ಪಿಡಿಒ ಹಾಗೂ ಸಿಬ್ಬಂದಿಗೂ ಊಟದ ವ್ಯವಸ್ಥೆ ಮಾಡುವ ಮೂಲಕ ಈ ಸಮಾಜ ಸೇವಕರ ತಂಡ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೆಗೆ ಕಾರಣವಾಗಿದ್ದಲ್ಲದೆ ಇತರೆಡೆಗೂ ಮಾದರಿಯಾಗಿದೆ. ಅನ್ನ-ಸಾಂಬಾರ್, ಪಲ್ಯ, ಉಪ್ಪಿನಕಾಯಿ ಹಾಗೂ ಬಾಟಲಿ ನೀರನ್ನು ಒಳಗೊಂಡ ಆಹಾರವನ್ನು ಯುವಕರ ಗ್ರಾಮದಲ್ಲಿ ಪ್ರತಿದಿನ ವಿತರಿಸುತ್ತಿದ್ದಾರೆ. ಯುವಕರ ಕಾರ್ಯಕ್ಕೆ ಬಂಟ್ವಾಳ ಗ್ರಾಮಾಂತರ ಪಿಎಸ್ಸೈ ಪ್ರಸನ್ನ ಹಾಗೂ ಸ್ಥಳೀಯ ಬೀಟ್ ಸಿಬ್ಬಂದಿ ಜನಾರ್ದನ ಅವರೂ ಸಹಕಾರ ನೀಡುತ್ತಿದ್ದಾರೆ.
0 comments:
Post a Comment