ವಿಟ್ಲ (ಕರಾವಳಿ ಟೈಮ್ಸ್) : ಸಾಂಕ್ರಾಮಿಕ ರೋಗಕ್ಕೆ ಭಯಭೀತರಾಗುವ ಬದಲು ಸಾವಧಾನವಾಗಿರಬೇಕು. ಸಾಮಾಜಿಕ ಬದ್ಧತೆಯ ನಿಟ್ಟಿನಲ್ಲಿ, ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ, ಕಾರ್ಯಕ್ರಮ ಮುಂದೂಡಲಾಗಿದೆಯಾದರೂ, ಮತ್ತೆ ಹಿಂದು ವಿರಾಟ್ ಸ್ವರೂಪದಲ್ಲಿಯೇ ನಡೆಯಲಿದೆ ಎಂದು ಮಧ್ಯಪ್ರದೇಶದ ಭೋಪಾಲ್ ಸಂಸದೆ ಸಾಧ್ವೀ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು.
ಅವರು ಭಾನುವಾರ ವಿಟ್ಲ ಪರಿಸರಕ್ಕೆ ಆಗಮಿಸಿ, ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ. ಹರೀಶ್ ನಾಯಕ್ ಅವರ ಮನೆಗೆ ತೆರಳಿ, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಹಿಂದುತ್ವದ ಪರಂಪರೆಗನುಗುಣವಾಗಿ ಅವುಗಳ ರಕ್ಷಣೆ ನಮ್ಮ ಹೊಣೆ. ಹಿಂದುತ್ವಕ್ಕಾಗಿ ಹಿಂದುತ್ವದ ಚೈತನ್ಯಕ್ಕಾಗಿ ಈ ಸಭೆ ಆಯೋಜಿಸಲಾಗಿತ್ತು. ಆದರೆ ಕೊರೊನಾ ಭೀತಿಯ ಕಾರಣಕ್ಕೆ ಸರಕಾರ ಸಾರ್ವಜನಿಕ ಕಾರ್ಯಕ್ರಮವನ್ನು ನಿಷೇಧಿಸಿದೆ. ಕೊರೋನಾ ರೋಗದಿಂದ ಮೃತಪಟ್ಟವರ ಆತ್ಮ ಸದ್ಗತಿಗಾಗಿ ಮತ್ತು ಅವರ ಕುಟುಂಬಕ್ಕೆ ದುಃಖ, ಕಷ್ಟ ಸಹಿಸುವ ಶಕ್ತಿ ಕೊಡಲಿ. ಈ ದುಃಖ, ಕಷ್ಟ ಇನ್ನಾರಿಗೂ ಬರದೇ ಇರಲಿ. ಇನ್ನಾವ ಜೀವವೂ ಕೊರೋನಾ ರೋಗಕ್ಕೆ ಬಲಿಯಾಗದಿರಲೆಂದು ಪ್ರಾರ್ಥಿಸುತ್ತೇನೆ ಎಂದರು.
ಕೊರೊನಾ ಭೀತಿಯಿಂದ ಸರಕಾರ ಎಚ್ಚರಿಕೆಯ ಆದೇಶ ನೀಡಿರುವುದರಿಂದ ವಿಟ್ಲದಲ್ಲಿ ಮಾ. 15 ರಂದು ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಸ್ಥಗಿತಗೊಳಿಸಿ, ಮುಂದೂಡಲಾಗಿತ್ತು. ಆದರೆ ಸಮಾಜೋತ್ಸವಕ್ಕಾಗಿ ಆಗಮಿಸಿ, ಪುತ್ತೂರಿನಲ್ಲಿ ತಂಗಿದ್ದ ಸಾಧ್ವೀ ಪ್ರಜ್ಞಾ ಸಿಂಗ್ ಠಾಕೂರ್ ಅವರು ರವಿವಾರ ವಿಟ್ಲಕ್ಕೆ ಮಧ್ಯಾಹ್ನ ತಲುಪಿದರು. ಬಳಿಕ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿಟ್ಲ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ. ಹರೀಶ್ ನಾಯಕ್ ವಿಟ್ಲ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಿಟ್ಲ, ಅಕ್ಷಯ್, ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್, ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment