ಸದಾಶಿವ ಬಂಗೇರ |
ಬಂಟ್ವಾಳ (ಕರಾವಳಿ ಟೈಮ್ಸ್) : ದೇಶಾದ್ಯಂತ ಲಾಕ್ ಡೌನ್ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ ಮಾರಕ ಕಾಯಿಲೆಯಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮವನ್ನೇ ಕೈಗೊಂಡಿದ್ದಾರೆ. ನಿಜಕ್ಕೂ ಸ್ವಾಗತಾರ್ಹ ಕ್ರಮ. ವಿರೋಧ ಪಕ್ಷಗಳೂ ಪಕ್ಷ ಬೇಧ ಮರೆತು ದೇಶದ ಪ್ರಧಾನಿಯ ಜೊತೆ ನಿಂತಿದ್ದಾರೆ. ಆದರೆ ಬಂದ್ ವೇಳೆ ಜನರ ಸಂಕಷ್ಟ ಪರಿಹಾರದ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಕ್ರಮ ಮಾತ್ರ ವಿಮರ್ಶಾತ್ಮಕವಾಗಿದೆ ಎಂದು ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ)ದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದ್ದಾರೆ.
ಲಾಕ್ ಡೌನ್ ಬಗ್ಗೆ ಹೇಳಿಕೆ ಮೂಲಕ ಜನತೆಗೆ ಸಂದೇಶ ನೀಡಿದ ಅವರು, ಸರಕಾರ ಉಜ್ವಲ, ಬಿಪಿಎಲ್ ಮೊದಲಾದ ಯೋಜನೆಗಳಡಿ ಪರಿಹಾರ ಕ್ರಮ ಘೋಷಣೆ ಮಾಡಿರುವುದು ಸರಿಯಲ್ಲ. ಕ್ಲಿಷ್ಟಕರ ಸಂದರ್ಭದಲ್ಲಿ ಕಡು ಬಡವರ ಜೊತೆ ಹೇಳಿಕೊಳ್ಳಲಾಗದ ಸಂಕಷ್ಟ ಪರಿಸ್ಥಿತಿ ಎದುರಿಸುವವರು ಮಧ್ಯಮ ವರ್ಗದ ಜನರಾಗಿದ್ದಾರೆ. ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಯಾರಲ್ಲೂ ಹೇಳಿಕೊಳ್ಳಲಾಗದ ಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ಪ್ರಧಾನಿಗಳು ಅರ್ಥಮಾಡಿಕೊಂಡು ವಿಶೇಷ ಪ್ಯಾಕೇಜ್ ಯೋಜನೆಗಳನ್ನು ದೇಶದ ಎಲ್ಲ ಜನರಿಗೂ ಏಕರೂಪದಲ್ಲಿ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸೈಯಲ್ಲಿ ಎಲ್ಲರೂ ಪ್ರಜೆಗಳೇ. ಹೀಗಿರುವಾಗ ಸಂಧಿಗ್ಧ ಪರಿಸ್ಥಿತಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗಳ ರಕ್ಷಣೆ ಸರಕಾರದ ಹೊಣೆಯಾಗಬೇಕು. ಇಂತಹ ಸಂದರ್ಭದಲ್ಲೂ ಜನರನ್ನು ಯೋಜನೆಯಾಧಾರಿತವಾಗಿ ವಿಭಜಿಸಿ ವ್ಯವಸ್ಥೆ ನೀಡುವ ಕ್ರಮ ಸರಿಯಲ್ಲ ಎಂದ ಸದಾಶಿವ ಬಂಗೇರ, ಸರಕಾರಿ ಕ್ಷೇತ್ರದಲ್ಲಿರುವ ಜನರಿಗಿಂತ ಎಷ್ಟೋ ಪಟ್ಟು ಜನ ಖಾಸಗಿ ಕ್ಷೇತ್ರದಲ್ಲಿ ದುಡಿಯುವವರಾಗಿದ್ದಾರೆ. ಖಾಸಗಿ ಕ್ಷೇತ್ರದ ಜನರ ಹಿತ ಕಾಯುವುದು ಸರಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.
ವೈರಸ್ ಹರಡುವ ವಿಷಮಕಾರಿ ಪರಿಸ್ಥಿತಿಯಲ್ಲಿ ದೇಶದ ಜನರಿಗಾಗಿ ಆಹೋ-ರಾತ್ರಿ ರಸ್ತೆಯಲ್ಲಿ, ಬೀದಿಯಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವಿಶೇಷ ಅಭಿನಂದನೆ ಸಲ್ಲಲೇಬೇಕಾಗಿದೆ. ಅದರಲ್ಲೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಉನ್ನತ ಅಧಿಕಾರಿಗಳಿಗೆ ಮಾತ್ರ ನೇರವಾಗಿ ಅಭಿನಂದನೆ ಸಲ್ಲುವುದಕ್ಕಿಂತಲೂ ತಳಮಟ್ಟದಲ್ಲಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತರಂತಹ ಸಿಬ್ಬಂದಿ ವರ್ಗಕ್ಕೆ ವಿಶೇಷ ಅಭಿನಂದನೆ ಸಲ್ಲಲೇಬೇಕಿದೆ ಎಂದ ಬಂಗೇರ ಈ ಮೂರು ಇಲಾಖೆಗಳ ಜೊತೆಗೆ ಸರಕಾರದ ಇತರ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೂಡಾ ಜನರ ರಕ್ಷಣೆಗೆ ಸರಕಾರ ಬಳಸಿಕೊಳ್ಳಬೇಕಿದೆ. ಕಫ್ರ್ಯೂ ಸಡಿಲಿಕೆ ವೇಳೆ ಜನರ ಅಂಗಡಿ-ಪೇಟೆಗಳಲ್ಲಿ ನೂಕು-ನುಗ್ಗಲು ಉಂಟುಮಾಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬರುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಸರಕಾರ ಇತರ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳನ್ನು ಬಳಸಿಕೊಂಡು ಪ್ರತಿ ಪೇಟೆ-ಪಟ್ಟಣಗಳ ಅಂಗಡಿಗಳ ಬಳಿ ನಿಯೋಜಿಸಿ ಜನರಿಗೆ ಮಾಹಿತಿ ಹಾಗೂ ಜಾಗೃತಿಯನ್ನು ಉಂಟುಮಾಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಪುರಸಭಾ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಆದ್ಯತೆ ಬೇಕಾಗಿದೆ
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಪುರಸಭೆಯ ಎಲ್ಲ ವಾರ್ಡ್‍ಗಳನ್ನೂ ಅಧಿಕಾರಿಗಳು ಪ್ರತ್ಯೇಕವಾಗಿ ಸ್ವತಃ ಭೇಟಿ ಮಾಡಿ ಸ್ವಚ್ಛತೆ ಬಗ್ಗೆ ಪರಾಮರ್ಶೆ ನಡೆಸಬೇಕಾಗಿದೆ. ಸ್ವಚ್ಛತೆ ಬಗ್ಗೆ ಕೇವಲ ಪತ್ರಿಕಾ ಹೇಳಿಕೆ ನೀಡಿದ ಮಾತ್ರಕ್ಕೆ ಸಾಂಕ್ರಾಮಿಕ ರೋಗಗಳು ನಿಯಂತ್ರಣವಾಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ವಾರ್ಡಿನಲ್ಲೂ ಔಷಧಿ ಸಿಂಪಡಣೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದ ಸದಾಶಿವ ಬಂಗೇರ, ನೈರ್ಮಲ್ಯಕ್ಕಾಗಿ ಗುತ್ತಿಗೆ ಆಧಾರಿತ ನೌಕರರು ಶಕ್ತಿ ಮೀರಿ ದುಡಿಯುತ್ತಿದ್ದು, ಇಂತಹ ಗುತ್ತಿಗೆಯಾಧಾರಿತ ನೌಕರರನ್ನೇ ಮುಂದಿನ ದಿನಗಳಲ್ಲಿ ಶಾಶ್ವತಗೊಳಿಸುವ ಮೂಲಕ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಮನ್ನಣೆ ನೀಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದಲ್ಲಿ ಹತ್ತು ತಿಂಗಳ ಮಗುವಿಗೆ ಕೋರೋಣ ಸೋಂಕು ದೃಢಪಟ್ಟಿರುವ ದರಿಂದ ಗ್ರಾಮಸ್ಥರೆಲ್ಲರೂ ಕಂಗಾಲಾಗಿದ್ದಾರೆ. ಹಸಿವು ನೀಗಿಸಲು ಅಗತ್ಯ ಸಾಮಗ್ರಿಗಳಿಗೆ
ReplyDeleteಮನೆಯಿಂದ ಹೊರಗೆ ಬರಲೂ ಕೂಡ ಸಾಧ್ಯವಾಗುತ್ತಿಲ್ಲ
ಆದ್ದರಿಂದ ಜಿಲ್ಲಾಡಳಿತವು ತಕ್ಷಣವೇ ಸಜಿಪನಡು ಗ್ರಾಮ ಗ್ರಾಮವನ್ನು ಕೊರಣ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಜನರ ಹಸಿವನ್ನು ನೀಗಿಸಲು ವಿಶೇಷ ಪ್ಯಾಕೇಜನ್ನು ಪೋಷಿಸಬೇಕಾಗಿದೆ
S Abubakkar Sajipa