ಮಾಜಿ ಸಚಿವ ಬಿ. ರಮಾನಾಥ ರೈ |
ಬಂಟ್ವಾಳ (ಕರಾವಳಿ ಟೈಮ್ಸ್) : ಜಾಗತಿಕ ಕೊರೋನಾ ವೈರಸ್ ಮಹಾಮಾರಿ ಜಗತ್ತಿನಾದ್ಯಂತ ಜನರನ್ನು ಆತಂಕಕ್ಕೆ ದೂಡಿರುವ ಹಿನ್ನಲೆಯಲ್ಲಿ ಜನ ಈ ಬಗ್ಗೆ ಯಾವುದೇ ಕಾರಣಕ್ಕೂ ಕ್ಷುಲ್ಲಕವಾಗಿ ಪರಿಗಣಿಸದೆ, ಅತ್ಯಂತ ಗಂಭೀರವಾಗಿ ಪರಿಗಣಿಸುವ ಮೂಲಕ ಸ್ವಯಂ ಪ್ರೇರಿತರಾಗಿ ಜಾಗೃತೆ ವಹಿಸಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಜನತೆಗೆ ಮನವಿ ಮಾಡಿದ್ದಾರೆ.
21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿ ಮಾಡುವಾಗ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಬಡ ಜನರಿಗೆ ಈಗಾಗಲೇ ಉಚಿತ ಅಕ್ಕಿಯನ್ನು ಸರಕಾರ ನೀಡುತ್ತಿದ್ದು, ಇದರ ಜೊತೆಗೆ ಅಗತ್ಯ ಸಾಮಾಗ್ರಿಗಳಾದ ಉಪ್ಪು, ಹುಳಿ, ಮೆಣಸು, ಎಣ್ಣೆ, ತೆಂಗಿನ ಕಾಯಿ ಮೊದಲಾದ ಪಡಿತರ ದಿನ ಬಳಕೆಯ ವಸ್ತುಗಳನ್ನು ಆದ್ಯತೆಯ ಮೇರೆಗೆ ಉಚಿತವಾಗಿ ವಿತರಿಸಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಮಾಜಿ ಸಚಿವ ರೈ ಅವರು ದಿನಕೂಲಿ ಕಾರ್ಮಿಕರ ಹಿತವನ್ನೂ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ಕೊರೋನಾ ವೈರಸ್ ತಡೆಗೆ ಆಹೋ-ರಾತ್ರಿ ಶ್ರಮಿಸುತ್ತಿರುವ ಸರಕಾರಿ ಅಧಿಕಾರಿಗಳು, ಸ್ವಯಂ ಸೇವಕರು, ಮಾಧ್ಯಮ ಮಂದಿಗಳ ಸಹಿತ ಅಗತ್ಯ ಕ್ಷೇತ್ರಗಳ ಮಂದಿಯ ಹಿತಕ್ಕೂ ಸರಕಾರ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಾರ್ವಜನಿಕರು ಸರಕಾರದ ಆದೇಶವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೊರೋನಾ ವೈರಸ್ ಜನರಿಂದ ಜನರಿಗೆ ಹರಡದಂತೆ ಜಾಗೃತೆ ವಹಿಸುವಂತೆ ಜನತೆಗೆ ವಿನಂತಿಸಿದ್ದಾರೆ.
0 comments:
Post a Comment