ಬಂಟ್ವಾಳ (ಕರಾವಳಿ ಟೈಮ್ಸ್) : ಜನರ ಹಸಿವಿನೊಂದಿಗೆ ಚೆಲ್ಲಾಟವಾಡಿದರೆ ಯಾವ ಕ್ರಮಗಳೂ ಫಲ ನೀಡದು. ಜನತೆ ಮೊದಲು ಹೊಟ್ಟೆ ಹಸಿವಿನಿಂದ ಮುಕ್ತರಾಗಬೇಕು. ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಸರಕಾರ ಕೈಗೊಂಡಾಗ ಜನ ಸ್ವಯಂನಿಯಂತ್ರಣಕ್ಕೆ ಖಂಡಿತವಾಗಿಯೂ ಬರುತ್ತಾರೆ ಎಂದು ಮಾಜಿ ಸಚಿವ ಬಿ ರಮಾನಾಥೈ ರೈ ಅಭಿಪ್ರಾಯ ಪಟ್ಟರು.
ಮಂಗಳವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೋನಾ ಅತ ಭಯಂಕರವಾದ ಮಾರಕ ಕಾಯಿಲೆಯಾಗಿದ್ದು, ಈ ಬಗ್ಗೆ ಜಾಗೃತಿ ವಹಿಸುವಲ್ಲಿ ಒಂದಷ್ಟು ಯಾಮಾರಿದರೂ ಇಡೀ ನಾಗರಿಕ ಸಮಾಜಕ್ಕೆ ಅಪಾಯ, ಆತಂಕ ಖಂಡಿತ ಎಂದವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಜನರಿಗೆ ಪೂರಕ ವ್ಯವಸ್ಥೆ ಮಾಡದೆ ದೀರ್ಘವಾಗಿ ಸಂಪೂರ್ಣ ಸ್ತಗಿತಗೊಳಿಸಿ ಆ ಬಳಿಕ ದಿಢೀರ್ ಮಾರುಕಟ್ಟೆ ಮುಕ್ತಗೊಳಿಸುವ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವೈರಸ್‍ಗೆ ಇರುವ ಪರಿಣಾಮಕಾರಿ ಕ್ರಮಕ್ಕೆ ಇದು ಅಡ್ಡಿಯಾಗಲಿದೆ. ಈ ಮೂಲಕ ದೀರ್ಘ ಕಾಲ ಕೈಗೊಂಡ ವೃತದಂತಹ ಸಾರ್ವಜನಿಕ ಶ್ರಮ ನೀರಿನಲ್ಲಿಟ್ಟ ಹೋಮದಂತಾಗುವಂತಾಗಿದೆ ಎಂದು ರಮಾನಾಥ ರೈ ಜಿಲ್ಲಾಡಳಿತದ ಕ್ರಮವನ್ನು ಕಟುವಾಗಿ ಟೀಕಿಸಿದರು.
ಜನರನ್ನು ಬಿಪಿಎಲ್-ಎಪಿಎಲ್ ಎಂಬ ವಿಭಜನೆಗಿಂತಲೂ ಎಲ್ಲರಿಗೂ ಒಂದು ವಾರಕ್ಕೆ ಸಾಕಾಗುವ ಉಚಿತ ರೇಶನ್ ಸಾಮಾಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕ್ರಮ ಕೈಗೊಂಡರೆ ಲಾಕ್‍ಡೌನ್ ಜನರಿಗೆ ಯಾವುದೇ ಕಾರಣಕ್ಕೂ ಹೊರೆಯಾಗುವುದಿಲ್ಲ. ಹೀಗಾದಾಗ ಜನ ಎಷ್ಟು ಕಷ್ಟವಾದರೂ ಹಸಿವು ನೀಗಿದರೆ ಸರಕಾರದೊಂದಿಗೆ ಸಹಕರಿಸುತ್ತಾರೆ ಎಂದ ರೈ ಸರಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಇಂತಹ ಕ್ರಮ ಕೈಗೊಳ್ಳುವುದು ಕಷ್ಟದ ಕೆಲಸವೇನೂ ಅಲ್ಲ. ಇಂತಹ ಕ್ರಮ ಸರಕಾರ ಕೈಗೊಂಡರೆ ಅದಕ್ಕೆ ವಿರೋಧ ಪಕ್ಷಗಳ ಬೆಂಬಲವೂ ಯಾವತ್ತೂ ಇದೆ. ಅದು ಬಿಟ್ಟು ಕೇವಲ ಘೋಷಣೆಗಳಿಗೆ ಯೋಜನೆಗಳನ್ನು ಸೀಮಿತಗೊಳಿಸಿದರೆ ಅದರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದರು.
ಪ್ರತೀ ಪಂಚಾಯತ್ ಮಟ್ಟದಲ್ಲಿ ನಿಯೋಗ ನಿರ್ಮಿಸಿ, ಅಥವಾ ಪಂಚಾಯತ್ ಮಟ್ಟದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಗಂಜಿ ಕೇಂದ್ರಗಳ ಮೂಲಕ ಜನರ ಹಸಿವು ತಣಿಸಲು ಬೇಕಾದ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಅಂಗನವಾಡಿ ಸಹಾಯಕಿಯರನ್ನು ಬಳಸಿಕೊಂಡು ಪ್ರತಿ ಮನೆಗೂ ರೇಶನ್ ಸಾಮಾಗ್ರಿಗಳನ್ನು ತಲಪಿಸುವ ಕಾರ್ಯ ಯೋಜನೆಯನ್ನು ಸರಕಾರ ಜಾರಿ ಮಾಡಲಿ. ಹೀಗಾದಾಗ ವ್ಯವಸ್ಥೆ ತನ್ನಿಂತಾನೆ ಸರಿ ಹೊಂದುತ್ತದೆ ಎಂದ ರಮಾನಾಥ ರೈ ಜಿಲ್ಲಾಡಳಿತ ಪ್ರತಿಯೊಂದಕ್ಕೂ ಸರಕಾರದ ಸುತ್ತೋಲೆಗಾಗಿ ಕಾಯದೆ ಜನರಿಗಾಗಿ ಅಗತ್ಯ ಕ್ರಮ ಕೈಗೊಂಡು ಬಳಿಕ ಆ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಕೇರಳದಲ್ಲಿ ಈಗಾಗಲೇ ಸರಕಾರ ಒಂದು ವಾರದ ಮಟ್ಟಿಗೆ ಜನರ ಆಶೋತ್ತರಗಳಿಗೆ ಬೇಕಾದ ಪಡಿತರಗಳನ್ನು ವಿತರಿಸಿದ್ದು, ಎರಡನೇ ವಾರಕ್ಕೆ ಬೇಕಾದ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕೂಡಾ ಜನರ ಹಿತದೃಷ್ಟಿಗಾಗಿ ನೆರೆ ರಾಜ್ಯದ ಮಾದರಿಯನ್ನು ಅನುಸರಿಸಬೇಕಾಗಿದೆ ಎಂದ ಮಾಜಿ ಸಚಿವರು ಸರಕಾರ ಸವಲತ್ತುಗಳನ್ನು ಜನರಿಗೆ ತಲುಪಿಸಲು ಚುನಾಯಿತ ಜನಪ್ರತಿನಿಧಿಗಳನ್ನು ಬಳಸುವ ಬದಲಾಗಿ ಸರಕಾರಿ ಮಟ್ಟದ ಸಿಬ್ಬಂದಿಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲ ಎಂದರಲ್ಲದೆ ಜನಪ್ರತಿನಿಧಿಗಳೂ ಕೂಡಾ ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ನಡೆಸುವ ಜನಸೇವೆ ಹೆಸರಿನಲ್ಲಿ ತಮ್ಮ ಸ್ವಾರ್ಥ ಭವಿಷ್ಯದ ಬಗ್ಗೆ ಚಿಂತಿಸದೆ ಹೃದಾಯ ವೈಶಾಲ್ಯದ ಕಾಳಜಿಯಿಂದ ಜನಸೇವೆಗೆ ಮುಂದಾಗಿಬೇಕಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯ ಲುಕ್ಮಾನ್ ಬಿ.ಸಿ.ರೋಡು, ಪ್ರಮುಖರಾದ ಡೆಂಝಿಲ್ ನೊರೊನ್ಹಾ, ವೆಂಕಪ್ಪ ಪೂಜಾರಿ ಮೊದಲಾದವರು ಜೊತೆಗಿದ್ದರು.
0 comments:
Post a Comment