ದಕ್ಷಿಣ ಕನ್ನಡ, ಉಡುಪಿಯಲ್ಲಿ ಬೆಳಗಿನ ಜಾವದಿಂದ ಮಳೆ
ಕರಾವಳಿಯಲ್ಲಿ ಮೋಡ ಕವಿದ ವಾತಾವರಣ : ಮಳೆ ಇನ್ನೂ ಮುಂದುವರಿಯುವ ಸಾಧ್ಯತೆ
ಸಾಂಸ್ಕøತಿಕ ನಗರಿ ಮೈಸೂರಿನಲ್ಲೂ ಮೊದಲ ಮಳೆಯ ದರ್ಶನ
ಬೆಂಗಳೂರು (ಕರಾವಳಿ ಟೈಮ್ಸ್) : ಭಾನುವಾರ ರಾತ್ರಿ ಹಾಗೂ ಸೋಮವಾರ ಮುಂಜಾನೆ ರಾಜ್ಯದ ಹಲವೆಡೆ ಅಕಾಲಿಕವಾಗಿ ವರುಣ ಪ್ರತ್ಯಕ್ಷಗೊಂಡಿದ್ದಾನೆ. ಅಕಾಲಿಕವಾಗಿ ಸುರಿದ ಮಳೆ ಕಾದ ಕಾವಲಿಯಂತಾದ ಇಳೆಗೆ ತಂಪೆರೆದಂತಾಗಿದೆ. ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಮೈಸೂರು ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ಬಿಸಿಲಿನ ಬೇಗೆಗೆ ಬಸವಳಿದಿದ್ದ ಜನರ ಮನಸ್ಸಿಗೆ ತಂಪೆರೆದಂತಾಗಿದೆ.
ತಡರಾತ್ರಿ ಕೆಲವೆಡೆ ದಿಢೀರ್ ಮಳೆಯಾಗಿದ್ದು, ಮುಂಜಾನೆ ಕೂಡ ಮಳೆ ಮುಂದುವರಿದಿದೆ. ಬೆಳಗಿನ ಜಾವದಿಂದಲೂ ನಗರಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ದಿಢೀರ್ ಮಳೆ ಹೆದ್ದಾರಿ ಕೆಸರುಮಯವಾಗಿದ್ದು, ಹೊಸದಾಗಿ ನಿರ್ಮಾಣವಾದ ರಸ್ತೆಯ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋದ ಘಟನೆಯೂ ವರದಿಯಾಗುತ್ತಿದೆ. ಸದ್ಯ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕುಗಳಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದಲೇ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಬೈಂದೂರು ವ್ಯಾಪ್ತಿಯಲ್ಲೂ ಅಲ್ಲಲ್ಲಿ ಮಳೆಯಾಗಿದ್ದು, ನಗರವಾಸಿಗಳಿಗೆ ಮಳೆ ಖುಷಿಕೊಟ್ಟರೆ ಕೃಷಿಕರು, ಬೇಸಾಯಗಾರರಿಗೆ ಆತಂಕ ಸೃಷ್ಟಿಸಿದೆ.
ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ವರುಣನ ಸಿಂಚನವಾಗಿದೆ. ಈ ವರ್ಷದ ಮೊದಲ ಮಳೆಗೆ ಇಳೆ ತಂಪಾಗಿದೆ. ಇದರಿಂದ ಅತಿಯಾದ ಧಗೆಯಿಂದ ಬಸವಳಿದಿದ್ದ ಜನರಿಗೆ ತಣ್ಣನೆಯ ಹಿತಾನುಭವವಾಗಿದೆ. ಇಂದು ಮುಂಜಾನೆ ಸುರಿದ ಮಳೆ ನಗರವಾಸಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿಯೂ ವರ್ಷದ ಮೊದಲ ಮಳೆಯಾಗಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆ ಸುರಿದಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಹಲವೆಡೆ ವರುಣನ ಅಗಮನವಾಗಿದೆ. ವರ್ಷದ ಮೊದಲ ಮಳೆ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೆಲ ಭಾಗದಲ್ಲಿ ಜಮೀನುಗಳಲ್ಲಿ ಬೆಳೆಗಳ ಕಟಾವು ಮಾಡಲಾಗಿದ್ದು, ಎಲ್ಲಿ ಮಳೆ ಹೆಚ್ಚು ಸುರಿದು ಬೆಳೆ ಹಾಳಾಗುತ್ತದೋ ಎಂದು ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಸಾಧಾರಣ ಮಳೆಯಾದ ಕಾರಣ ರೈತರು ನಿಟ್ಟುಸಿರು ಬಿಟ್ಟಿದ್ದು, ಬಿಸಿಲ ತಾಪಕ್ಕೆ ಬೇಸತ್ತ ಜನರಿಗೆ ತಂಪಾದಂತಾಗಿದೆ. ಮಳೆಯಿಂದ ವಾತಾವರಣ ಕೂಡ ತಂಪಾಗಿದ್ದು, ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಸಂತಸವಾಗಿದೆ.
0 comments:
Post a Comment