ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿ, ಮಾನವ ಜೀವಗಳನ್ನು ಬಲಿ ಪಡಯುತ್ತಾ ಮುನ್ನುಗ್ಗುತ್ತಿರುವ ಸಂದರ್ಭ ವಿಶ್ವವೇ ಈ ಮಹಾಮಾರಿಯನ್ನು ಮಣಿಸಲು ಸಮರೋಪಾದಿಯಲ್ಲಿ ಕಾರ್ಯನಿರವಾಗಿದ್ದರೆ, ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತ್ರ ಪಂಚಾಯತ್ ವ್ಯಾಪ್ತಿಯಲ್ಲಿ ಕೊಳಚೆ ತುಂಬಿ ತುಳುಕುತ್ತಿದ್ದರೂ ಇನ್ನೂ ಎಚ್ಚೆತ್ತುಕೊಳ್ಳದೆ ಇರುವುದರಿಂದ ಇಲ್ಲಿನ ಜನ ಸಾಂಕ್ರಾಮಿಕ ರೋಗ ಭೀತಿಯಲ್ಲಿ ಆತಂಕಪಡುವಂತಾಗಿದೆ.
ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ನೆಹರುನಗರ ತಿರುವು ಪಡೆಯುತ್ತಿರುವ ಒಳ ರಸ್ತೆಯ ಮಧ್ಯಭಾಗದಲ್ಲೇ ತ್ಯಾಜ್ಯ, ಕಸ-ಕಡ್ಡಿಗಳು ತುಂಬಿ ತುಳುಕುತ್ತಿದ್ದು, ನರಿ-ನಾಯಿ, ಜಾನುವಾರುಗಳು ತಿನ್ನುತ್ತಾ ಎಲ್ಲೆಂದರಲ್ಲಿ ಎಳೆದಾಡುತ್ತಾ ಇಡೀ ಪರಿಸರವನ್ನೇ ದುರ್ನಾತಗೊಳಿಸುತ್ತಿದೆ. ನೆಹರುನಗರ ಪ್ರದೇಶಕ್ಕೆ ಪ್ರವೇಶ ಪಡೆಯುವ ಪ್ರಮುಖ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಜನ-ವಾಹನ ಸಂಚಾರ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯ ಪಕ್ಕದಲ್ಲೇ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬದ್ರಿಯಾ ಜುಮಾ ಮಸೀದಿ ಕೂಡಾ ಇದ್ದು, ಹಲವಾರು ವಾಸ್ತವ್ಯದ ಮನೆಗಳೂ ಇವೆ. ಈ ರಸ್ತೆಯಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ನಿತ್ಯವೂ ಇಲ್ಲಿ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ದುಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯರು. ಈ ಬಗ್ಗೆ ಪಂಚಾಯತ್‍ಗೆ ಹಲವು ಬಾರಿ ದೂರಿಕೊಂಡರೂ ಯಾವುದೇ ಸ್ಪಂದನೆ ತೋರುವ ಕನಿಷ್ಠ ಪ್ರಯತ್ನವನ್ನೂ ಮಾಡಲಾಗುತ್ತಿಲ್ಲ ಎಂದು ಜನ ದೂರುತ್ತಾರೆ. ಇದೇನೂ ಇಂದು ನಿನ್ನೆಯ ಪರಿಸ್ಥಿತಿಯಲ್ಲ. ಬದಲಾಗಿ ಹಲವು ಸಮಯಗಳಿಂದ ಈ ಸಮಸ್ಯೆ ಇಲ್ಲಿ ತಾಂಡವವಾಡುತ್ತಿದೆ. ಕೊರೋನಾ ವೈರಸ್‍ನಿಂದ ಜಗತ್ತೇ ಎಚ್ಚೆತ್ತುಕೊಂಡ ಬಳಿಕವಾದರೂ ಇಲ್ಲಿನ ಪಂಚಾಯತ್ ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸುತ್ತದೆ ಎಂದುಕೊಂಡರೆ ಈಗಲೂ ಈ ಬಗ್ಗೆ ಪಂಚಾಯತ್ ಯಾವುದೇ ಸ್ಪಂದನೆ ದೊರೆತಿಲ್ಲ ಗ್ರಾಮಸ್ಥರು ದೂರಿದ್ದಾರೆ.
ಕೊರೊನಾ ವೈರಸ್ ಬಗ್ಗೆ ಆಪರೇಶನ್‍ಗೆ ಮಹತ್ವ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಶಾಸಕರು, ಜಿಲ್ಲಾಧಿಕಾರಿ, ತಾಲೂಕು ತಹಶೀಲ್ದಾರರು, ತಾಲೂಕು ಆರೋಗ್ಯಾಧಿಕಾರಿಗಳು ಈ ಬಗ್ಗೆ ತಕ್ಷಣ ಎಚ್ಚೆತ್ತು ನರಿಕೊಂಬು ಗ್ರಾಮಸ್ಥರನ್ನು ಸಂಭಾವ್ಯ ಸಾಂಕ್ರಾಮಿಕ ರೋಗ ಭೀತಿಯಿಂದ ಮುಕ್ತಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
0 comments:
Post a Comment