ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಸೋಂಕು (ಕೋವಿಡ್-19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್.ಪಿ.ಆರ್) ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ.
2021ರ ಮೊದಲ ಹಂತದ ಜನಗಣತಿ ಮತ್ತು ಎನ್‍ಪಿಆರ್ ಅನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಇದೇ ಎಪ್ರಿಲ್ 1 ರಿಂದ ಮೊದಲ ಹಂತದ ಎನ್.ಪಿ.ಆರ್ ಮತ್ತು ಜನಗಣತಿಯು ಆರಂಭವಾಗಬೇಕಿತ್ತು. ಆದರೆ ಮುಂದಿನ 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಹೇರಿರುವ ಹಿನ್ನಲೆಯಲ್ಲಿ ಎನ್.ಪಿ.ಆರ್. ಮತ್ತು ಜನಗಣತಿಯನ್ನು ಮುಂದೂಡಲಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವಾಲಯವು ಎನ್.ಪಿ.ಆರ್. ಕುರಿತ ಸಿದ್ಧತೆ ಅಂತಿಮ ಹಂತದಲ್ಲಿದೆ ಎಂದು ಹೇಳಿತ್ತು.
ಕೊವಿಡ್-19 ಸೋಂಕು ಭೀತಿ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಎ.), ಎನ್.ಪಿ.ಆರ್.ನಂತಹ ಯೋಜನೆಗಳನ್ನು ಸರಕಾರ ಮುಂದೂಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರವನ್ನು ಇತ್ತೀಚೆಗೆ ಒತ್ತಾಯಿಸಿದ್ದವು. ಇದಕ್ಕೂ ಮೊದಲು ಬಿಜೆಪಿಯೇತರ ಸರ್ಕಾರಗಳಿರುವ ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ರಾಜಸ್ಥಾನ, ಛತ್ತೀಸ್‍ಘಡ ಮತ್ತು ಬಿಹಾರ ರಾಜ್ಯಗಳು ಎನ್.ಪಿ.ಆರ್. ವಿರೋಧಿಸಿದ್ದವು.
0 comments:
Post a Comment