ಬೆಂಗಳೂರು (ಕರಾವಳಿ ಟೈಮ್ಸ್) : ಕರ್ನಾಟಕದಲ್ಲಿ ಮೊದಲ ಕೊರೊನಾ ಕೇಸ್ ದೃಢಪಟ್ಟ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳ ದಿನಾಂಕ ಬದಲಿಸಿದ್ದು, ಪರೀಕ್ಷೆಗಳನ್ನು ಬೇಗ ಮುಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದೆಡೆ ಪರೀಕ್ಷೆಗಳನ್ನು ಬೇಗ ಮುಗಿಸಿ ಮಕ್ಕಳಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಮಾ. 16ಕ್ಕೆ 5ನೇ ತರಗತಿಗೆ ಪರೀಕ್ಷೆ ಮುಗಿಸಬೇಕು. ಮಾರ್ಚ್ 23 ರೊಳಗೆ 6 ರಿಂದ 9ನೇ ತರಗತಿವರೆಗಿನ ಪರೀಕ್ಷೆ ಮುಗಿಯಬೇಕು. 1 ರಿಂದ 4ನೇ ತರಗತಿಗೆ ಮುಂದಿನ ಪರೀಕ್ಷಾ ದಿನಾಂಕ ಪ್ರಕಟ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ಪ್ರೈಮರಿ ಶಾಲೆಗಳ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಲಾಗಿದೆ. ಈ ಮೊದಲು ಪ್ರೀ ಕೆಜಿ, ಎಲ್‍ಕೆಜಿ, ಯುಕೆಜಿ ಮಕ್ಕಳಿಗೆ ಮಾರ್ಚ್ 31 ರವರೆಗೂ ಸರ್ಕಾರ ರಜೆ ಘೋಷಿಸಿತ್ತು. ಆದರೆ ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ಕೇಸ್ ಕಂಡು ಬಂದ ಹಿನ್ನೆಲೆಯಲ್ಲಿ ರಜೆಯನ್ನು ಐದನೇ ತರಗತಿವರೆಗೂ ವಿಸ್ತರಿಸಲಾಗಿದೆ. ಮಾರ್ಚ್ 17ರ ವರೆಗೂ ಬೆಂಗಳೂರು ವ್ಯಾಪ್ತಿಯ ಅಂಗನವಾಡಿಗಳಿಗೂ ರಜೆ ಘೋಷಿಸಲಾಗಿದೆ.
0 comments:
Post a Comment