ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕದ ವಿವಾದ ಗುರುವಾರ ರಾಜ್ಯ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ.
ಶೂನ್ಯವೇಳೆಯಲ್ಲಿ ಮಂಗಳೂರು ಶಾಸಕ ಯು ಟಿ ಖಾದರ್ ವಿಷಯ ಪ್ರಸ್ತಾಪಿಸಿ, ನನ್ನ ಕ್ಷೇತ್ರದ ಸಜಿಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವಿಗೆ ಸ್ಥಳೀಯರ ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಂಟ್ವಾಳ ಪುರಸಭೆಯ ತ್ಯಾಜ್ಯ ವನ್ನು ಸಂಸ್ಕರಿಸಲು ಘಟಕಕ್ಕೆ ಬಂದಾಗ ಸ್ಥಳೀಯರು ವಿರೋಧ ವ್ಯಕ್ತಪಡಿದ್ದಾರೆ. ಅವರನ್ನು ಪೋಲೀಸರು ಬಲವಂತವಾಗಿ ಬಂಧಿಸಿದ್ದಾರೆ. ಮತ್ತು ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ತ್ಯಾಜ್ಯ ಘಟಕ ಆರಂಭಿಸುವುದು ಸರಿಯಲ್ಲ. ತಕ್ಷಣ ಅಲ್ಲಿ ಕಸ ಹಾಕುವುದನ್ನು ನಿಲ್ಲಿಸಲು ಆದೇಶ ಮಾಡಬೇಕು. ಘಟಕವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಪಂಚಾಯತ್ ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಕೊಂಡು ಸಮಸ್ಯೆ ಪರಿಹಾರ ಮಾಡಿ ಮುಂದುವರಿಯಬೇಕು, ಯಾವುದೇ ಕೆಲಸಗಳು ದಬ್ಬಾಳಿಕೆಯಿಂದಲೇ ಅಗುತ್ತದೆ ಎಂದರೆ ಅದು ಸರಿಯಲ್ಲ. ಅಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಅಲ್ಲಿಂದ ಬೇರೆ ಕಡೆಗೆ ಘಟಕವನ್ನು ವರ್ಗಾವಣೆ ಮಾಡುವ ಕೆಲಸ ಅಥವಾ ಸಮಸ್ಯೆ ಪರಿಹಾರ ಮಾಡಿದ ಬಳಿಕ ತ್ಯಾಜ್ಯ ವಿಲೇವಾರಿ ಮಾಡಿ ಎಂದು ಶಾಸಕ ಖಾದರ್ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು, 2007-08 ರಲ್ಲಿ ಈ ಘಟಕ ಪ್ರಾರಂಭವಾಗಿದೆ. ಪುರಸಭೆಯ ಕ್ಷೇತ್ರ ನನ್ನದು, ಕಸ ವಿಲೇವಾರಿ ಮಾಡುವ ಜಾಗ ಶಾಸಕ ಯು ಟಿ ಖಾದರ್ ಅವರ ಕ್ಷೇತ್ರಕ್ಕೆ ಸಂಬಂಧಪಟ್ಟದ್ದು. ಕಳೆದ 12 ವರ್ಷಗಳಿಂದ ತ್ಯಾಜ್ಯ ವ್ಯಾಜ್ಯಗಳು ನಡೆಯುತ್ತಿದೆ. ಹಾಗಾಗಿ ಈ ಸಮಸ್ಯೆ ನಿವಾರಿಸಲು ಪ್ರತ್ಯೇಕ ಸದನ ಸಮಿತಿ ಮಾಡಿ ಅವರು ಘಟಕದಲ್ಲಿ ತ್ಯಾಜ್ಯ ಸಂಸ್ಕರಿಸಲು ಒಪ್ಪಿಗೆ ನೀಡಿದೆ, ಪರಿಸರ ಇಲಾಖೆಯೂ ಒಪ್ಪಿದೆ. ಪುರಸಭೆಯ ಕಸ ವಿಲೇವಾರಿಗೆ ಬೇರೆ ಜಾಗವಿಲ್ಲ. ಹಾಗಾಗಿ ಯು ಟಿ ಖಾದರ್ ಹಾಗೂ ನಾನು ಜೊತೆ ಸೇರಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇದು ಪುರಸಭೆ ಮತ್ತು ಅಲ್ಲಿನ ತಾಲೂಕು ಆಡಳಿತಕ್ಕೆ ಬರುವ ವಿಚಾರ. ಸ್ಥಳದಲ್ಲಿ ಘರ್ಷಣೆ ನಡೆದಾಗ ಶಾಂತಿ ಕಾಪಾಡುವ ಸಲುವಾಗಿ ಪೋಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಇಬ್ಬರು ಶಾಸಕರು ಸೇರಿ ಮಾತನಾಡಿ ಸಮಸ್ಯೆ ಬಗೆಹರಿಸಲಿ ಎಂದರು.
ಈ ಬಗ್ಗೆ ಪ್ರತಿಕ್ರಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಂಟ್ವಾಳ ಹಾಗೂ ಮಂಗಳೂರು ಶಾಸಕರು ಸಮನ್ವಯದಿಂದ ಬಗೆಹರಿಸುವಂತೆ ಸಲಹೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.
0 comments:
Post a Comment