ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಹರಡುವಿಕೆ ನಿಯಂತ್ರಿಸಲು ದೇಶದಲ್ಲಿ ಲಾಕ್ ಡೌನ್ ಘೋಷಣೆಯ ಬಳಿಕ ಜಿಲ್ಲೆಯಲ್ಲಿ ಹಲವು ಆಸ್ಪತ್ರೆಗಳು ತಮ್ಮ ಹೊರ ರೋಗಿಗಳಿಗೆ ನೀಡುವ ಚಿಕಿತ್ಸಾ ಸೇವೆಯನ್ನು ಸ್ಥಗಿತಗೊಳಿಸಿವೆ. ಇದರಿಂದ ಅನೇಕ ರೋಗಿಗಳಿಗೆ ಸಕಾಲಕ್ಕೆ ವೈದ್ಯರ ಸಲಹೆ, ಔಷಧಗಳು ಸಿಗದೆ ತೊಂದರೆಗೀಡಾಗಿದ್ದಾರೆ.
ಇದಕ್ಕಾಗಿ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿರುವ ಕೆ.ಎಸ್. ಹೆಗ್ಡೆ ಆಸ್ಪತ್ರೆ ವಿನೂತನವಾಗಿ ರೋಗಿಗಳ ಸೇವೆಗೆ ಹೊಸ ಕಾರ್ಯಕ್ರಮ ಆರಂಭಿಸಿದೆ. ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ಇಲ್ಲದ ಕಾರಣ ಕೆ.ಎಸ್. ಹೆಗ್ಡೆ ಆಸ್ಪತ್ರೆ ಆನ್ ಲೈನ್ ಮೂಲಕ ರೋಗಿಗಳ ಸೇವೆಗೆ ಮುಂದಾಗಿದೆ.
ಆಸ್ಪತೆಯಿಂದ ಎಲ್ಲಾ ವಿಭಾಗದ ವೈದ್ಯರ ವಾಟ್ಸಪ್ ನಂಬರ್ ನೀಡಲಾಗಿದ್ದು, ಆಯಾ ವಿಭಾಗದ ವೈದ್ಯರಿಗೆ ಯಾವುದಾದರೂ ರೋಗಗಳಿಂದ ಬಳಲುತ್ತಿರುವ ರೋಗಿಗಳು ವಾಟ್ಸಾಪ್‍ನಲ್ಲಿ ತಮ್ಮ ರೋಗ ಲಕ್ಷಣ ಮಾಹಿತಿಯನ್ನು ರವಾನಿಸಬೇಕು. ಇದರೊಂದಿಗೆ ಹೆಸರು, ವಯಸ್ಸು, ಲಿಂಗ, ತೂಕ, ಖಾಯಿಲೆಯ ಮಾಹಿತಿ ಹಾಗೂ ಹಳೆಯ ಪ್ರಿಸ್ಕ್ರಿಪ್ಷನ್ ಗಳಿದ್ದರೆ ತಪ್ಪದೆ ನೀಡಬೇಕು. ಇವೆಲ್ಲವೂ ನೋಡಿದ ಬಳಿಕ ಅಗತ್ಯವಿದ್ದರೆ ವೈದ್ಯರೇ ನಿಮಗೆ ಕರೆ ಮಾಡುತ್ತಾರೆ ಇಲ್ಲವಾದರೆ, ಯಾವ ಔಷಧಿ ಸೂಕ್ತವೆಂದು ಅಥವಾ ವೈದ್ಯರ ಸಲಹೆಯನ್ನು “ವೈದ್ಯರ ನೊಂದಣೆ ಸಂಖ್ಯೆಯಿರುವ ಚೀಟಿಯಲ್ಲಿ” ಬರೆದು ರೋಗಿಗಳ ಸಂಖ್ಯೆಗೆ ವೈದ್ಯರು ವಾಟ್ಸಾಪ್ ಮಾಡಲಿದ್ದಾರೆ. ಬಳಿಕ ಔಷಧಿಯನ್ನು ಸಮೀಪದ ಮೆಡಿಕಲ್ ನಲ್ಲಿ ಪಡೆಯಬಹುದಾಗಿದೆ.
ಮಾರಕ ಕೊರೊನಾದಿಂದ ಪಾರಾಗಲು, ಸಾಮಾಜಿಕ ಅಂತರ ಕಾಯ್ದುಗೊಳ್ಳುವುದು ಹಾಗೂ ಮನೆಯಲ್ಲಿರುವುದು ಸದ್ಯದ ಮುನ್ನೆಚ್ಚರಿಕಾ ಕ್ರಮವಾಗಿರುವ ಹಿನ್ನಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ದೇರಳಕಟ್ಟೆಯಲ್ಲಿರುವ ಕೆ.ಎಸ್. ಹೆಗ್ಡೆ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಬಾರಿಗೆ ಈ ವಾಟ್ಸಪ್ ಮೂಲಕ ವಿನೂತನ ಸೇವೆಗೆ ಮುಂದಾಗಿದೆ.
0 comments:
Post a Comment