ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು |
ಜನಸಂಖ್ಯೆ ವಿಶ್ವದಾಖಲೆ ಹಂತಕ್ಕೇರುತ್ತಿದ್ದರೂ ವೆಂಟಿಲೇಟರ್ ಸಮಸ್ಯೆ ಮಿತಿ ಮೀರಿದೆ
ಮಂಗಳೂರು (ಕರಾವಳಿ ಟೈಮ್ಸ್) : ದೇಶಾದ್ಯಂತ ಕಳೆದ ಹತ್ತು ದಿನಗಳಿಂದ ಲಾಕ್ ಡೌನ್ ಘೋಷಣೆಯಾಗಿದ್ದು, ಮಾರಕ ಕೋವಿಡ್-19 ವೈರಸ್ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಾಗಿದ್ದರೂ ಜನ ಸಾಮಾನ್ಯರು, ಅದರಲ್ಲೂ ದಿನಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಮಂದಿಗಳು ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ನಿತ್ಯದ ಆಹಾರಕ್ಕಾಗಿ ಪರದಾಟ ನಡೆಸಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಕೆಲಸ ಇಲ್ಲದ ದಿನಗಳು ಹೆಚ್ಚುತ್ತಿರುವುದರಿಂದ ಜನರ ಕೈಯಲ್ಲಿ ಸಂಪತ್ತಿನ ಕ್ರೋಢೀಕರಣವೂ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್. ಅಬೂಬಕ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಶ್ರೀಮಂತರು ಸುಖವಾಗಿದ್ದರೆ, ಬಡವರಿಗೆ ಸರಕಾರ ಹಾಗೂ ಸಂಘ-ಸಂಸ್ಥೆಗಳ ದಾನ ರೂಪದ ನೆರವು ದೊರೆಯುತ್ತಿದೆ. ಆದರೆ ಈ ಮಧ್ಯೆ ಮಧ್ಯಮ ವರ್ಗದ ಕುಟುಂಬಗಳು ಅತ್ತ ಬದಕಲೂ ಆಗದ, ಇತ್ತ ಸಾಯಲೂ ಆಗದ ಸಂಧಿಗ್ಧ ಪರಿಸ್ಥಿತಿ ಎದುರಿಸುವಂತಾಗಿದೆ. ಕೆಲಸವಿಲ್ಲದೆ ಸಂಪತ್ತಿನ ಕ್ರೋಢೀಕರಣ ಇಲ್ಲದೆ ತುತ್ತು ಅನ್ನಕ್ಕೆ ಬೇಕಾದ ಸಾಮಾಗ್ರಿ ಖರೀಸಲೂ ಸಾಧ್ಯವಾಗುತ್ತಿಲ್ಲ. ಇನ್ನೊಬ್ಬರ ಬಳಿ ಕೇಳಲು ಆತ್ಮಾಭಿಮಾನ ಒಪ್ಪುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದ ಕುಟುಂಬ ಚಡಪಡಿಸುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ-ಸಂಸ್ಥೆಗಳು ಇಂತಹ ಕುಟುಂಬಗಳ ಒಳಗುಟ್ಟನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಅವರಿಗೆ ನೆರವಿನ ಹಸ್ತ ಚಾಚಬೇಕಿದೆ. ಈ ಮೂಲಕ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವುದು ಪ್ರಸ್ತುತ ಸನ್ನಿವೇಶದಲ್ಲಿ ಅತೀ ಮುಖ್ಯ. ಈ ಹಿನ್ನಲೆಯಲ್ಲಿ ಗಂಭೀರ ಚಿಂತನೆಗಳು ಸಮಾಜದಲ್ಲಿ ನಡೆಯಬೇಕಿದೆ ಎಂದು ಅಬೂಬಕ್ಕರ್ ಸಲಹೆ ನೀಡಿದ್ದಾರೆ.
ಜನಸಂಖ್ಯೆ ದಾಖಲೆಗೇರುತ್ತಿದ್ದರೂ ವೆಂಟಿಲೇಟರ್ ಸಮಸ್ಯೆ ಮಿತಿ ಮೀರಿದೆ
ಇನ್ನೇನು ಚೀನಾ ದೇಶವನ್ನು ಜನಸಂಖ್ಯೆಯಲ್ಲಿ ಮೀರಿಸುವ ಹಂತದಲ್ಲಿ ಭಾರತ ದೇಶ ಇದ್ದರೂ ನಮ್ಮಲ್ಲಿರುವ ವೆಂಟಿಲೇಟರ್ ವ್ಯವಸ್ಥೆ ಏನೇನೋ ಸಾಲದು. ಈ ನಿಟ್ಟಿನಲ್ಲಿ ಸರಕಾರಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ. ಕರ್ನಾಟಕ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 300 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 700 ಹೀಗೆ ರಾಜ್ಯದಲ್ಲಿ ಒಟ್ಟು ಕೇವಲ 1000 ಸಾವಿರ ವೆಂಟಿಲೇಟರ್ ವ್ಯವಸ್ಥೆ ಮಾತ್ರ ಇದೆ. ದೇಶಕ್ಕೆ ಹೋಲಿಸಿದಾಗ ಇಡೀ ದೇಶದಲ್ಲಿ ಕೇವಲ 40 ಸಾವಿರ ವೆಂಟಿಲೇಟರ್ ಮಾತ್ರ ಇರುವುದು ಈಗಾಗಲೇ ಅಧ್ಯಯನಗಳಿಂದ ತಿಳಿದು ಬರುತ್ತಿದ್ದು, ಇದು ನಮ್ಮ ದೇಶದ ಜನಸಂಖ್ಯೆಗೆ ಹೋಲಿಸಿದರೆ ಎಲ್ಲಿಗೂ ಸಾಲದು ಎಂಬ ಪರಿಸ್ಥಿತಿ ಇದೆ. ಮಾರಕ ಕೋವಿಡ್-19 ಖಾಯಿಲೆಗೆ ಮುಖ್ಯವಾಗಿ ಬೇಕಾಗಿರುವುದು ವೆಂಟಿಲೇಟರ್ ವ್ಯವಸ್ಥೆ. ಆದುದರಿಂದ ಮುಂದಿನ ದಿನಗಳಲ್ಲಿ ಸರಕಾರಗಳು ಮಹತ್ವದ ಹಾಗೂ ಜಾಗರೂಕತೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ.
ಅಲ್ಲದೆ ಜನ ಕೂಡಾ ಈ ಮಾರಕ ವೈರಸನ್ನು ಹಿಮ್ಮಟ್ಟಿಸಲು ಮನೆಯಲ್ಲಿ ಕೂರುವುದೇ ಏಕಮಾತ್ರ ಪರಿಹಾರ. ಶಕ್ತಿ ಮೀರಿ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ರಕ್ಷಣೆ ನಾವೇ ಮಾಡಬೇಕಿದೆ. ಪರಿಸ್ಥಿತಿ ಕೈ ಮೀರಿದರೆ ಯಾರನ್ನೂ ದೂರಿ ಫಲವಿಲ್ಲ ಎಂದ ಅಬೂಬಕ್ಕರ್, ಇನ್ನಾದರೂ ಜನ ಮೋಜು, ಮಸ್ತಿ, ಆಡಂಬರ ಜೀವನ್ನು ತ್ಯಜಿಸಿ, ಭಗವಂತನೆಡೆಗೆ ಸಮೀಪಿಸಲು ಇದು ಸದಾವಕಾಶ ಎಂದು ಮನಗಂಡು ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ. ತಪ್ಪಿದಲ್ಲಿ ವೈಯುಕ್ತಿಕವಾಗಿಯೂ, ಕುಟುಂಬಕ್ಕೂ, ಸಮುದಾಯಕ್ಕೂ, ಸಮಾಜಕ್ಕೂ, ರಾಜ್ಯಕ್ಕೂ, ದೇಶಕ್ಕೂ ಮಾತ್ರವಲ್ಲ ಜಗತ್ತಿಗೇ ಗಂಡಾಂತರ ಖಂಡಿತ ಎಂಬುದನ್ನು ಮನಗಾಣಬೇಕಿದೆ ಎಂದು ಹಾಜಿ ಅಬೂಬಕ್ಕರ್ ಎಚ್ಚರಿಸಿದ್ದಾರೆ.
0 comments:
Post a Comment