ನವದೆಹಲಿ (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ. ರಾಜ್ಯದ ಪ್ರಬಲ ಸಮುದಾಯಗಳಲ್ಲೊಂದಾಗಿರುವ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.
ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಹಂಚಿಕೆಯಾಗಿದ್ದು, ಪ್ರಸಕ್ತ ಇರುವ ಈಶ್ವರ್ ಖಂಡ್ರೆ ಜೊತೆಗೆ ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಅವರನ್ನೂ ಸಹ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳನ್ನಾಗಿ ನೇಮಿಸಲಾಗಿದೆ.
ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ (ಲಿಂಗಾಯತ), ಸತೀಶ್ ಜಾರಕಿಹೊಳಿ (ವಾಲ್ಮೀಕಿ ಸಮುದಾಯ), ಸಲೀಂ ಅಹಮದ್ (ಅಲ್ಪಸಂಖ್ಯಾತ) ಅವರನ್ನು ನೇಮಿಸುವ ಮೂಲಕ ಲಿಂಗಾಯತ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ತಂತ್ರಗಾರಿಕೆಗೆ ಕೈ ಹೈಕಮಾಂಡ್ ಮುಂದಾಗಿದೆ.
15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದರು. ಡಿಕೆಶಿ ನೇಮಕಗೊಳಿಸಿರುವ ಹೈಕಮಾಂಡ್, ದಿನೇಶ್ ಗುಂಡೂರಾವ್ ರಾಜೀನಾಮೆ ಅಂಗೀಕರಿಸಿದೆ. ಗುಂಡೂರಾವ್ ಅವರ ಸೇವೆಗೆ ಕಾಂಗ್ರೆಸ್ ಹೈಕಮಾಂಡ್ ಧನ್ಯವಾದ ಸಲ್ಲಿಸಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಅಂಗೀಕಾರ ನೀಡದ ಕೈ ಹೈಕಮಾಂಡ್ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮುಂದುವರಿಸಿದೆ. ವಿಧಾನ ಪರಿಷತ್‍ಗೆ ನಾರಾಯಣಸ್ವಾಮಿ ಮತ್ತು ವಿಧಾನಸಭೆಗೆ ಅಜಯ್ ಸಿಂಗ್ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಿದೆ.
0 comments:
Post a Comment