ಮಂಗಳೂರು (ಕರಾವಳಿ ಟೈಮ್ಸ್) : ಕರೋನಾ ವೈರಸ್ ಕಬಂಧ ಬಾಹು ವಿಸ್ತರಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿನ ರೋಗಿಗಳನ್ನು ಮಾತ್ರ ಆರೈಕೆ ಮಾಡುತ್ತಿದ್ದು, ಇತರ ರೋಗಿಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಂತಾದ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ.
ತಾಲೂಕಿನ ಅಡ್ಡೂರು ನಿವಾಸಿ ಸುಲೈಮಾನ್ ಅವರು ಬುಧವಾರ ಸಂಜೆ ತನ್ನ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾದ ಪರಿಣಾಮ ಪ್ರಜ್ಞೆ ಕಳೆದುಕೊಂಡಿದ್ದರು. ಈ ಸಂದರ್ಭ ಮನೆ ಮಂದಿ ಹಾಗೂ ಸ್ಥಳೀಯರು ಸೇರಿಕೊಂಡು ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಂಗಳೂರಿನ ಪ್ರಮುಖ ಮೂರು ಖಾಸಗಿ ಆಸ್ಪತ್ರೆಗಳಾದ ಎಸ್‍ಸಿಎಸ್, ಫಾದರ್ ಮುಲ್ಲರ್ ಹಾಗೂ ಹೈಲ್ಯಾಂಡ್ ಆಸ್ಪತ್ರೆಗಳು ಗಂಭೀರಾವಸ್ಥೆಯಲ್ಲಿರುವ ಸುಲೈಮಾನ್ ಅವರನ್ನು ಒಳರೋಗಿಯಾಗಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಎಷ್ಟೇ ಕೋರಿಕೊಂಡರೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಯನ್ನು ದಾಖಲಿಸಿಕೊಳ್ಳಲು ಸುತಾರಾಂ ಒಪ್ಪಲೇ ಇಲ್ಲ ಎಂದು ಸುಲೈಮಾನ್ ಸಂಬಂಧಿ ಮಜೀದ್ ಆರೋಪಿಸಿದ್ದಾರೆ. ಕೊನೆಗೆ ಕಂಗಲಾದ ಕುಟುಂಬಸ್ಥರು ಎಜೆ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಗಂಭೀರಾವಸ್ಥೆಯಲ್ಲಿದ್ದ ಸುಲೈಮಾನ್ ಅವರನ್ನು ದಾಖಲಿಸಿದ್ದು, ಇದೀಗ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ಬಗ್ಗೆ ಎಚ್ಚರ ವಹಿಸಿರುವ ಆಸ್ಪತ್ರೆಗಳು ಉಳಿದ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಅಂತಹ ರೋಗಿಗಳ ಅವಸ್ಥೆ ಏನು ಎಂದು ಪ್ರಶ್ನಿಸಿರುವ ಸುಲೈಮಾನ್ ಸಂಬಂಧಿಕರು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಆರೋಗ್ಯಾಧಿಕಾರಿಗಳು ಕಠಿಣ ಕ್ರಮ ಜರುಗಿಸಿ ಜನರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
0 comments:
Post a Comment