ನವದೆಹಲಿ (ಕರಾವಳಿ ಟೈಮ್ಸ್) : ಕೊರೊನಾದಿಂದ ಕಂಗೆಟ್ಟವರಿಗೆ ಪ್ರಧಾನ ಮಂತ್ರಿ ನಿಧಿಯಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1.70 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ್ದಾರೆ. ಇದು ಜನರ ಜೀವನ ಮತ್ತು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಹೊರಬರಲು 1.70 ಲಕ್ಷ ಕೋಟಿ ರೂಪಾಯಿ ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಕ್ಕಿ ಯೋಜನೆ ಅಡಿ ಈಗಾಗಲೇ 5 ಕೆಜಿ ಅಕ್ಕಿ/ ಗೋಧಿ ನೀಡಲಾಗುತ್ತಿದೆ. ಇದರ ಜೊತೆ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ವಲಸೆ ಕಾರ್ಮಿಕರು, ನಗರ ಮತ್ತು ಗ್ರಾಮೀಣ ಬಡವರಿಗೆ, ತಕ್ಷಣದ ಸಹಾಯದ ಅಗತ್ಯವಿರುವ ಬಡವರಿಗೆ ಪ್ಯಾಕೇಜ್ ಸಿದ್ಧವಾಗಿದೆ. ಯಾರೂ ಹಸಿವಿನಿಂದ ಬಲಳಬಾರದು ಎನ್ನುವುದು ನಮ್ಮ ಸರ್ಕಾರ ಉದ್ದೇಶ. ಹೀಗಾಗಿ 1.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೇವೆ ಎಂದರು.
8.69 ಕೋಟಿ ರೂಪಾಯಿ ರೈತರ ಖಾತೆಗೆ ಈ ಕೂಡಲೇ ಏಪ್ರಿಲ್ ತಿಂಗಳ 2 ಸಾವಿರ ರೂಪಾಯಿ ಹಣವನ್ನು ಹಾಕಲಾಗುವುದು. ನರೇಗಾ ಯೋಜನೆ ಅಡಿ ಕೆಲಸ ಮಾಡುವ ಪ್ರತಿ ಕಾರ್ಮಿಕರಿಗೆ 2 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಲಾಗುವುದು ಎಂದರು.
ವಿತ್ತ ಸಚಿವರ ಸುದ್ದಿಗೋಷ್ಠಿಯ ಮುಖ್ಯಾಂಶಗಳು
ವಿಧವೆಯರು, ಹಿರಿಯ ನಾಗರಿಕರು, ದಿವ್ಯಾಂಗರು ಅಂಗವಿಕಲರಿಗೆ ಒಂದು ಬಾರಿಯ ಪರಿಹಾರ ಮೊತ್ತ 1,000 ರೂ. ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲ.
3 ತಿಂಗಳ ಕಾಲ ಮಹಿಳಾ ಜನ ಧನ್ ಖಾತೆಗೆ 500 ರೂ. ಹಾಕಲಾಗುವುದು. ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳವರೆಗೂ ಮೂರು ಅನಿಲ ಸಿಲಿಂಡರ್‍ಗಳು ಉಚಿತ ವಿತರಣೆ. ಈ ನಿರ್ಧಾರದಿಂಧ 8 ಕೋಟಿ ಮಹಿಳೆಯರಿಗೆ ಲಾಭ.
ಮುಂದಿನ ತಿಂಗಳು ಸಂಸ್ಥೆಗಳು ಮತ್ತು ಉದ್ಯೋಗಿಗಳ ಇಪಿಎಫ್ ಮೊತ್ತವನ್ನು ಸರ್ಕಾರವೇ ತುಂಬಲಿದೆ. 100 ಉದ್ಯೋಗಿಗಳು ಇರುವ ಸಂಸ್ಥೆ ಹಾಗೂ ತಿಂಗಳಿಗೆ 15,000 ರೂಪಾಯಿವರೆಗೂ ವೇತನ ಪಡೆಯುತ್ತಿರುವ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಇದರ ಲಾಭ ಸಿಗಲಿದೆ.
ಇಪಿಎಫ್ ಯೋಜನೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಮರು ಪಾವತಿ ಮಾಡದಿರದ ವ್ಯವಸ್ಥೆಯಡಿ ಶೇ. 75ರಷ್ಟು ಇಪಿಎಫ್ ಮುಂಗಡ ಮೊತ್ತ ಪಡೆಯಲು ಅವಕಾಶ ಸಿಗುತ್ತದೆ. ಕಾರ್ಮಿಕರು 3 ತಿಂಗಳ ಸಂಬಳ ಅಥವಾ ಶೇ. 75ರಷ್ಟು ಮುಂಗಡ ಮೊತ್ತ;, ಇದರಲ್ಲಿ ಯಾವುದು ಕಡಿಮೆಯೋ ಅದನ್ನು ಪಡೆಯಬಹುದಾಗಿದೆ. ಇದರಿಂದ ಇಪಿಎಫ್ ನೋಂದಾಯಿಸಿರುವ ಸುಮಾರು 4.8 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
0 comments:
Post a Comment