ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ತಡೆಗಾಗಿ ರಾಷ್ಟ್ರಾದ್ಯಂತ ಏಪ್ರಿಲ್ 14ರವರೆಗೆ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಕುರಿತು ಎಪ್ರಿಲ್ 20 ರ ಬಳಿಕ ನಿರ್ಧರಿಸಲಾಗುವುದು ಎಂದು ಸರಕಾರ ತಿಳಿಸಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಗುರುವಾರ ಸುತ್ತೋಲೆ ಹೊರಡಿಸಿದ್ದು, 7, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಕೂಡಾ ಎಪ್ರಿಲ್ 20 ರವರೆಗೆ ಮುಂದೂಡಲಾಗಿದೆ ಎಂದು ತಿಳಿಸಿದೆ.
2020-21ನೇ ಸಾಲಿನ ದಾಖಲಾತಿ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (ಆರ್‍ಟಿಇ) ಮಕ್ಕಳ ದಾಖಲಾತಿ ಪ್ರಕ್ರಿಯೆಗಳನ್ನು ಕೂಡಾ ಎ. 20ರವರೆಗೆ ಮುಂದೂಡಲಾಗಿದೆ, ಆ ಬಳಿಕವಷ್ಟೇ ಈ ಎಲ್ಲ ವಿಷಯಗಳಲ್ಲಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದಾಗಿದೆ ಎಂಬ ಒಂದು ಅಪ್ಪಟ ಸುಳ್ಳು ಸುದ್ಧಿ ಹರಿದಾಡುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಮಾಡುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರೀಕ್ಷೆಗಳ ಕುರಿತು ಚರ್ಚಿಸಲು ಯಾವುದೇ ಸಭೆಯೂ ಆಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಗುರುವಾರ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
0 comments:
Post a Comment