ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಭಿನ್ನ ಹೇಳಿಕೆ : ಗೊಂದಲದಲ್ಲಿ ಜಿಲ್ಲೆಯ ಜನ, ಸಾಮಾಜಿಕ ತಾಣಗಳಲ್ಲಿ ಸಕತ್ ಟ್ರೋಲ್ - Karavali Times ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಭಿನ್ನ ಹೇಳಿಕೆ : ಗೊಂದಲದಲ್ಲಿ ಜಿಲ್ಲೆಯ ಜನ, ಸಾಮಾಜಿಕ ತಾಣಗಳಲ್ಲಿ ಸಕತ್ ಟ್ರೋಲ್ - Karavali Times

728x90

25 March 2020

ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಭಿನ್ನ ಹೇಳಿಕೆ : ಗೊಂದಲದಲ್ಲಿ ಜಿಲ್ಲೆಯ ಜನ, ಸಾಮಾಜಿಕ ತಾಣಗಳಲ್ಲಿ ಸಕತ್ ಟ್ರೋಲ್



ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್‍ಗೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಅಗತ್ಯ ಸೇವೆಗಳ ಒದಗಿಸುವಿಕೆ ಬಗ್ಗೆ ಕೆಲವೇ ನಿಮಿಷಗಳ ಅಂತರದಲ್ಲಿ ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರತಿ ಹೇಳಿಕೆಗಳು ಒಂದಕ್ಕೊಂದು ಹೊಂದಾಣಿಕೆಯಾಗದ ಹಿನ್ನಲೆಯಲ್ಲಿ ಜನ ಸಂಪೂರ್ಣವಾಗಿ ಗೊಂದಲವನ್ನು ಅನುಭವಿಸುವಂತಾಗಿದೆ.

    ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ಬೆಳಿಗ್ಗೆ ಮಾತನಾಡಿ ನಾಳೆಯಿಂದ ಬಂದ್ ಸಡಿಲಿಕೆ ಇಲ್ಲ. ದಿನಪೂರ್ತಿ ಬಂದ್ ಆಗಲಿದೆ. ಜನರಿಗೆ ಅಗತ್ಯ ಸೇವೆಗಳನ್ನು ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದರೆ, ಕೆಲವೇ ಕ್ಷಣಗಳಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಹೇಳಿಕೆ ಮಾಡಿ ಜನತೆ ಅಗತ್ಯ ಸೇವೆಗಳಿಗಾಗಿ ಆತಂಕಪಡಬೇಕಾಗಿಲ್ಲ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ಸೇವೆ ಖರೀದಿಗೆ ಅವಕಾಶ ನೀಡಲಾಗುವುದು ಎನ್ನುತ್ತಾರೆ. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ಬೆಳಿಗ್ಗೆ 6ರಿಂದ 10ರವರೆಗೆ ಸೆಂಟ್ರಲ್ ಮಾರ್ಕೆಟಲ್ಲಿ ಅಂಗಡಿದಾರರಿಗೆ ಖರೀದಿಗೆ ಅವಕಾಶ, ಬೆಳಿಗ್ಗೆ 6 ರಿಂದ 12ರವರೆಗೆ ದಿನಸಿ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್‍ಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಈ ವೇಳೆ ಜನ ಅಗತ್ಯ ಸೇವೆ ಪಡೆದುಕೊಳ್ಳಬಹುದು ಎಂದು ಹೇಳಿಕೆ ನೀಡುತ್ತಾರೆ. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಸ್ವತಃ ಜೊತೆಯಲ್ಲಿರುತ್ತಾರೆ. ಮತ್ತೊಂದೆಡೆ ಬೆಂಗಳೂರು ಡಿಜಿಪಿ ಪ್ರವೀಣ್ ಸೂದ್ ಅವರು ಸೂಪರ್ ಮಾರ್ಕೆಟ್‍ಗಳು, ದಿನಸಿ ಅಂಗಡಿಗಳು ಜನಜಂಗುಳಿ ನಿಯಂತ್ರಣದ ಹಿನ್ನಲೆಯಲ್ಲಿ ದಿನದ 24 ಗಂಟೆಯೂ ಓಪನ್ ಇರುತ್ತದೆ ಎಂಬ ಹೇಳಿಕೆ ನೀಡುತ್ತಾರೆ.

    ರಾಜ್ಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭಿನ್ನ ಹೇಳಿಕೆಗಳು ಜನರಲ್ಲಿ ಒಂದು ರೀತಿಯ ಗೊಂದಲ ಮೂಡಿಸುತ್ತಿದೆ. ಜನ ಒಟ್ಟಾರೆ ಲಾಕ್ ಡೌನ್ ಬಗ್ಗೆಯೇ ಒಂದು ರೀತಿಯ ಗೊಂದಲದ ವಾತಾವರಣ ಎದುರಿಸುವಂತಾಗಿದೆ. ಇನ್ನೊಂದೆಡೆ ಅಧಿಕಾರಿಗಳು ಹಾಗೂ ಸರಕಾರ ನೀಡಿದ ರಿಯಾಯಿ ಅವಧಿಯಲ್ಲೂ ರಸ್ತೆಗೆ ಇಳಿದರೆ ಪೊಲೀಸರು ಬಲವಂತಪಡಿಸುವ ವಾತಾವರಣವೂ ಕಂಡು ಬರುತ್ತಿದೆ.

    ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಟ್ರೋಲ್ ಆಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆಯೇ ಒಮ್ಮತ-ಹೊಂದಾಣಿಕೆ ಇಲ್ಲದೆ ಇದ್ದು, ಇದು ಜನರ ಗೊಂದಲ-ಪರದಾಟಕ್ಕೆ ಕಾರಣವಾಗುತ್ತಿದೆ ಎಂದ ಧಾಟಿಯ ಬರಹಗಳು ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ.

 

ಲಾಕ್ ಡೌನ್ ಬದಲಿಗೆ ಜನಸಂದಣಿ ನಿಯಂತ್ರಣಕ್ಕೆ ಒತ್ತು ನೀಡಲಿ 


    ಈ ನಡುವೆ ಪೂರ್ಣ ಲಾಕ್ ಡೌನ್ ಹಾಗೂ ಅದರ ಮಧ್ಯೆ ಅಗತ್ಯ ಸೇವೆಗಳಿಗಾಗಿ ರಿಯಾಯಿತಿ ಇವುಗಳ ಮಧ್ಯೆ ಗೊಂದಲ ಏರ್ಪಟ್ಟು ಜನ ಪರದಾಟ ನಡೆಸುವಂತಾಗಿದ್ದು, ಇದರಿಂದ ಜನ ಕೆಲಸ-ವೃತ್ತಿಗಳಿಲ್ಲದೆ ಕಂಗಾಲಾಗಿದ್ದಾರೆ. ಇದರ ಬದಲಾಗಿ ಸಂಪೂರ್ಣ ಲಾಕ್ ಡೌನ್ ನಿಯಂತ್ರಿಸಿ ಜನ ಸಂದಣಿ ನಿಯಂತ್ರಿಸುವ ಮೂಲಕ ನಿಯಂತ್ರಿತ ಸಾಮಾಜಿಕ ಜೀವನಕ್ಕೆ ಸರಕಾರಗಳು ಒತ್ತು ನೀಡಿದರೆ ಚೆನ್ನಾಗಿತ್ತು ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ.

    ಪೂರ್ಣ ಲಾಕ್ ಡೌನ್ ನಿಂದಾಗಿ ಜನ ಕೆಲಸವಿಲ್ಲದೆ ಮನೆಯಲ್ಲೂ ಕುಳಿತು ಕೊಳ್ಳಲಾಗದೆ ಪರಿಸರದಲ್ಲೋ, ಮೈದಾನಲ್ಲೋ ಒಟ್ಟು ಸೇರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಇದನ್ನು ನಿಯಂತ್ರಿಸಲು ದೈನಂದಿನ ಕೆಲಸ-ಕಾರ್ಯಗಳಿಗೆ ಅವಕಾಶ ನೀಡಿ ಜನ ಒಂದೇ ಕಡೆ ಸೇರುವುದರ ಬಗ್ಗೆ ಮಾತ್ರ ನಿಯಂತ್ರಣ ಹೇರಿದರೆ ಎಲ್ಲವೂ ಸರಿ ಹೋಗಬಹುದು ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಭಿನ್ನ ಹೇಳಿಕೆ : ಗೊಂದಲದಲ್ಲಿ ಜಿಲ್ಲೆಯ ಜನ, ಸಾಮಾಜಿಕ ತಾಣಗಳಲ್ಲಿ ಸಕತ್ ಟ್ರೋಲ್ Rating: 5 Reviewed By: karavali Times
Scroll to Top