ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಲ್ಲಿ ಮೊದಲ ಕೋವಿಡ್-19 ಪ್ರಕರಣ ಶುಕ್ರವಾರ ದೃಢಪಟ್ಟಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಕಛೇರಿ ಪ್ರಕಟಣೆ ತಿಳಿಸಿದೆ.
ತಾಲೂಕಿನ ಸಜಿಪನಡು ಗ್ರಾಮದ ಲಕ್ಷ್ಮಣಕಟ್ಟೆ ನಿವಾಸಿ 10 ತಿಂಗಳು ಹಸುಳೆಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಮಾ. 23 ರಂದು ಕಂದಮ್ಮನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮಗುವಿನ ಗಂಟಲು ದ್ರವ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ಅಂತಿಮ ವರದಿ ಬಂದಿದ್ದು ಮಗುವಿಗೆ ಕೊರೋನ ಸೊಂಕು ತಗಲಿರುವುದು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
ಆದರೆ ಮಗು ಈಗ ಸಂಪೂರ್ಣ ಚೇತರಿಕೆಯಲ್ಲಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ವಾರ್ಡಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಮಗುವಿನ ತಾಯಿ ಮತ್ತು ಅಜ್ಜಿಯನ್ನು ವೈದ್ಯರು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದಾರೆ ಹಾಗೂ ಕುಟುಂಬದ ಇತರ ಸದಸ್ಯರನ್ನು ಮನೆಯಲ್ಲೇ ಇರಿಸಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಎಲ್ಲಾ ಶಂಕಿತ ಪ್ರಕರಣಗಳೂ ಕೂಡಾ ವಿದೇಶದಿಂದ ಬಂದವರಿಂದ ವರದಿಯಾಗಿತ್ತು. ಆದರೆ ಇದೀಗ ಗ್ರಾಮೀಣ ಪ್ರದೇಶದ ಮನೆಯಲ್ಲಿದ್ದ ಎಳೆಯ ಹಸುಳೆಯಲ್ಲಿ ಕೋವಿಡ್-19 ಪೊಸಿಟಿವ್ ಪ್ರಕರಣ ದೃಢಪಟ್ಟಿರುವುದು ತಾಲೂಕು ಹಾಗೂ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಪ್ರಕರಣ ದೃಢಪಡುತ್ತಲೇ ಸಜಿಪನಡು ಇಡೀ ಗ್ರಾಮವನ್ನೇ ಹೋಂ ಕ್ವಾರಂಟೈನ್ ಗ್ರಾಮವಾಗಿ ಘೋಷಿಸಲಾಗಿದ್ದು, ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸೋಂಕು ದೃಢಪಟ್ಟ ಮಗುವಿನ ಮನೆಗೂ ಸಂಪರ್ಕ ಬಂದ್ ಮಾಡಲಾಗಿದೆ. ಪೊಲೀಸರು ಗ್ರಾಮವನ್ನು ತಮ್ಮ ಹತೋಟಿಗೆ ಪಡೆದುಕೊಂಡಿದ್ದಾರೆ. ಸುತ್ತಲೂ ನಾಕಾಬಂದಿ ಏರ್ಪಡಿಸಲಾಗಿದೆ.
ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಜಿಲ್ಲೆಯ ಹಾಗೂ ಬಂಟ್ವಾಳ ತಾಲೂಕಿನ ಜನರಿಗೆ ಇದರ ಭಯಾನಕತೆ ಅರ್ಥವಾಗಿರಲಿಲ್ಲ. ಇದೀಗ ತಾಲೂಕಿನ ಗ್ರಾಮದಲ್ಲೇ ಕೋವಿಡ್ ಪ್ರಕರಣ ದೃಢಪಟ್ಟಿರುವ ಹಿನ್ನಲೆಯಲ್ಲಿ ಜನ ಆತಂಕದೊಂದಿಗೆ ಸ್ವನಿಯಂತ್ರಣಕ್ಕೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
0 comments:
Post a Comment