ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ನೆರೆ ರಾಜ್ಯ/ ಜಿಲ್ಲೆಗಳಲ್ಲೆ ಕೋವಿಡ್-19 (ಕೊರೊನಾ ವೈರಾಣು ಖಾಯಿಲೆ-2019) ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದಂತೆ ಮಾರ್ಚ್ 22 ರ ರಾತ್ರಿ 9 ಗಂಟೆಯಿಂದ ಮಾ 31 ರ ಮಧ್ಯರಾತ್ತಿ 12 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರ ಅನ್ವಯ ನಿಷೇಧಾಜ್ಞೆ ಈಗಾಗಲೇ ಜಾರಿಯಲ್ಲಿರುತ್ತದೆ. ಅದರಂತೆ ಈ ಕೆಳಗಿನ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
1. ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳಾಗಿರುವ ಕೇರಳ ರಾಜ್ಯಕ್ಕೆ ಹೊಂದಿಕೊಂಡಂತೆ ಸಾರಡ್ಕ, ಬೆರಿಪದವು, ಆನೆಕಲ್, ನೆಲ್ಲಿಕಟ್ಟೆ, ಸಾಲೆತ್ತೂರು, ಗಾಳಿಮುಖ, ಸುಳ್ಯಪದವು, ಕಾಟುಕುಕ್ಕೆ, ಮಾರೂರು, ಮಂಡೆಕೋಲು, ಕನ್ನಡಿಕಲ್ಲು, ಕಲ್ಲಪಲ್ಲಿ ಸೇರಿದಂತೆ ಒಟ್ಟು 12 ಅಂತರ್ ರಾಜ್ಯ ಚೆಕ್ ಪೆÇೀಸ್ಟುಗಳು,
ಉಡುಪಿ ಜಿಲ್ಲೆಗೆ ಹೊಂದಿಕೊಂಡಂತೆ ನಾರಾವಿ, ಚಿಕ್ಕಮಗಳೂರು ಜಿಲ್ಲೆಗೆ ಹೊಂದಿಕೊಂಡಂತೆ ಚಾರ್ಮಾಡಿ, ಹಾಸನ ಜಿಲ್ಲೆಗೆ ಹೊಂದಿಕೊಂಡಂತೆ ಗುಂಡ್ಯ ಮತ್ತು ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಕಲ್ಲುಗುಂಡಿಯಲ್ಲಿ ಒಟ್ಟು 4 ಅಂತರ್ ಜಿಲ್ಲಾ ಚೆಕ್ ಪೆÇೀಸ್ಟುಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಇತರೆ ರಾಜ್ಯ/ ಜಿಲ್ಲೆ/ ತಾಲೂಕುಗಳಿಗೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
2. ಜನರು ಗುಂಪು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಯಾವುದೇ ಸನ್ನಿವೇಶದಲ್ಲೂ ಗುಂಪಾಗಿ ಸೇರುವಂತಿಲ್ಲ.
3. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಕರ್ತವ್ಯಕ್ಕೆ ತಲಾ ಒಬ್ಬರು ಎಸ್ಪಿ ಹಾಗೂ ಎಡಿಶನಲ್ ಎಸ್ಪಿ, ಇಬ್ಬರು ಡಿವೈಎಸ್ಪಿ, 10 ಮಂದಿ ಇನ್ಸ್‍ಪೆಕ್ಟರುಗಳು, 29 ಮಂದಿ ಪಿಎಸ್ಸೈ, 101 ಮಂದಿ ಎಎಸ್ಸೈ, 281 ಎಚ್.ಸಿ. ಹಾಗೂ 456 ಮಂದಿ ಪಿಸಿಗಳೂ ಸೇರಿದಂತೆ ಒಟ್ಟು 881 ಮಂದಿ ಅಧಿಕಾರಿ/ ಸಿಬ್ಬಂದಿ ವರ್ಗವನ್ನು ನಿಯೋಜಿಸಲಾಗಿದೆ.
4. ಸಾರ್ವಜನಿಕರು ತುರ್ತು ಮತ್ತು ಅತೀ ಅವಶ್ಯಕ ಕಾರ್ಯಗಳನ್ನು ಹೊರತುಪಡಿಸಿ ಇನ್ಯಾವುದೇ ಕಾರ್ಯಗಳಿಗೆ ವಿನಾ ಕಾರಣ ತಮ್ಮ ವಾಸಸ್ಥಾನದಿಂದ ಹೊರಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಅವಶ್ಯಕ ಸೇವೆಗಳಾದ ಆಹಾರ, ಪಡಿತರ ಅಂಗಡಿ, ಹಾಲು ತರಕಾರಿ, ದಿನಸಿ, ಮೀನು, ಮಾಂಸ, ಹಣ್ಣಿನ ಮಾರುಕಟ್ಟೆ ಮತ್ತು ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ಮಾತ್ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಲು ಅವಕಾಶವಿರುತ್ತದೆ. ನಂತರ ಕಡ್ಡಾಯವಾಗಿ ಮುಚ್ಚತಕ್ಕದ್ದು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು, ತುರ್ತು ಅವಶ್ಯಕ ಸೇವೆಗಳಾದ ಸರಕಾರಿ ಸೇವಾ ಕಛೇರಿಗಳು ಹಾಗೂ ಆಸ್ಪತ್ರೆ, ಮೆಡಿಕಲ್ ಶಾಪ್, ಮೆಡಿಕಲ್ ಕ್ಲಿನಿಕ್, ಮೆಡಿಕಲ್ ಲ್ಯಾಬೋರೇಟರಿಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. .
5. ಸಾರ್ವಜನಿಕರು ತಮ್ಮ ಮನೆಗಳಲ್ಲೂ ಯಾವುದೇ ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗಿದೆ.
6. ಸಾಮಾಜಿಕ ಅಂತರವನ್ನು ಪಾಲಿಸುವ ದೃಷ್ಟಿಯಲ್ಲಿ ಜನಜಂಗುಳಿ ಸೇರುವಂತಹ ಯಾವುದೇ ಸಭೆ-ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮಗಳು, ಶಿಬಿರ, ವಸ್ತು ಪ್ರದರ್ಶನ, ಕ್ರೀಡಾ ಚಟುವಟಿಕೆಗಳು/ ಪಂದ್ಯಾಟ, ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಉತ್ಸವ/ ಜಾತ್ರೆಗಳನ್ನು ನಿಷೇಧಿಸಲಾಗಿದೆ.
7. ಅವಶ್ಯಕ ಸೇವೆಗಳು ಮತ್ತು ವಸ್ತುಗಳು, ಆಹಾರ, ವೈದ್ಯಕೀಯ ಉಪಕರಣಗಳು, ಔಷಧ, ಇಂಧನ ಹಾಗೂ ಕೃಷಿ ಉತ್ಪನ್ನಗಳ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಕೈಗಾರಿಕೆ/ ಕಾರ್ಖಾನೆಗಳನ್ನು ಸ್ಥಗಿತಗೊಳಿಸತಕ್ಕದ್ದು.
8. ಯಾವುದೇ ಪ್ರವಾಸಿ ತಾಣಗಳಿಗಳಿಗೆ ಪ್ರವಾಸಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
9. ರಸ್ತೆ ಸಾರಿಗೆ ನಿಗಮ ಮತ್ತು ಖಾಸಗಿ ಸಾರಿಗೆ ಬಸ್ಸುಗಳ ಸಂಚಾರವ್ನು ಕಡ್ಡಾಯವಾಗಿ ಸ್ಥಗಿತಗೊಳಿಸಲಾಗಿದ್ದು, ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಸಾರಿಗೆ ಲಭ್ಯವಿರುವುದಿಲ್ಲ.
10. ಅಟೋ ರಿಕ್ಷಾ ಹಾಗೂ ಬಾಡಿಗೆ ಟ್ಯಾಕ್ಸಿ, ವೈದ್ಯಕೀಯ ತುರ್ತು ಹಾಗೂ ಅಗತ್ಯ ಸೇವೆಯ ಸಮಯ ಹೊರತುಪಡಿಸಿ ಓಲಾ, ಉಬಾರ್, ಟ್ಯಾಕ್ಸೀಸ್ ಸೇರಿದಂತೆ ಯಾವುದೇ ಬಾಡಿಗೆ ವಾಹನ ಸೇವೆಗಳನ್ನು ಬಳಸತಕ್ಕದ್ದಲ್ಲ. ತಪ್ಪಿದಲ್ಲಿ ಅಂತಹವರ ವಿರುದ್ದ ಮೋಟಾರು ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
11. ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕರು ಗುಂಪಾಗಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
12. ಮನೆಯಲ್ಲೇ ನಿರ್ಬಂಧಿಸಲಾದ ವ್ಯಕ್ತಿಗಳು (ಹೋಂ ಕ್ವಾರಂಟೈನ್) 14 ದಿನಗಳವರೆಗೆ ಮನೆಯಲ್ಲೇ ಇರತಕ್ಕದ್ದು. ಈ ಬಗ್ಗೆ ಸದ್ರಿ ವ್ಯಕ್ತಿಗಳ ಮನೆಯವರಿಗೆ ಹಾಗೂ ಪರಿಸರದ ನಿವಾಸಿಗಳಿಗೆ ಈಗಾಗಲೇ ಸೂಕ್ತ ಮಾಹಿತಿ ನೀಡಲಾಗಿದ್ದು, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.
13. ಈಗಾಗಲೇ ಸಂಬಂಧಪಟ್ಟ ಬೀಟ್ ಸಿಬ್ಬಂದಿಗಳು ಮನೆಯಲ್ಲೇ ನಿರ್ಬಂಧಿಸಲಾದ ವ್ಯಕ್ತಿಗಳ ಮೇಲೆ ನಿಗಾ ಇರಿಸಿದ್ದು, ಸದ್ರಿ ವ್ಯಕ್ತಿಗಳ ನಿವಾಸಕ್ಕೆ ಭೇಟಿ ನೀಡುತ್ತಿರುತ್ತಾರೆ. ಸದ್ರಿ ವ್ಯಕ್ತಿಗಳು ಮನೆ ಬಿಟ್ಟು ಇತರ ಸಾಮಾಜಿಕ ಸ್ಥಳಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
14. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಂಡ ಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ಯಾವುದೇ ವ್ಯಾಪಾರಸ್ಥರು/ ವರ್ತಕರು ಈ ಮೇಲಿನ ಸೂಚನೆಗಳನ್ನು ಉಲ್ಲಂಘಿಸಿ ವ್ಯವಹಾರ ನಡೆಸಿದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕ ಹಿತದರಷ್ಟಿಯಿಂದ ಇ ಮೇಲಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು. ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಇರಲಿ. ಯಾವುದೇ ಭಯ ಬೇಡ. ಯಾವುದೇ ದೂರುಗಳಿದ್ದಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ಸಂಖ್ಯೆ 0824-2220508, 9480805300 ಸಂಪರ್ಕಿಸುವಂತೆ ಜಿಲ್ಲಾ ಎಸ್ಪಿ ಅವರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment