ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಭೀತಿಗೆ ಒಳಗಾಗಿರುವ ರಾಜ್ಯ ಸರಕಾರ ಒಂದು ವಾರ ರಾಜ್ಯಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ನೂರಕ್ಕೂ ಅಧಿಕ ಜನ ಸೇರುವ ಎಲ್ಲಾ ಸಭೆ-ಸಮಾರಂಭಗಳು, ಕಾರ್ಯಕ್ರಮಗಳಿಗ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾರಾಂತ್ಯ (ವೀಕೆಂಡ್) ದಿನಗಳಾಗಿರುವ ಶನಿವಾರ ಹಾಗೂ ಭಾನುವಾರ ದಿನಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಾಗಿರುವ ಜಾತ್ರೆ, ಉರೂಸ್, ಪ್ರವಚನ, ಉಪನ್ಯಾಸ ಸೇರಿದಂತೆ ವಿವಿಧ ಧರ್ಮಗಳ ಆಚರಣೆಗಳನ್ನು ಮಸೀದಿ, ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳ ಆಶ್ರಯದಲ್ಲಿ ನಿಗದಿಪಡಿಸಲಾಗಿದ್ದು, ಎಲ್ಲ ಕಡೆಯೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯನ್ನು ಸಂಘಟಕರು ಇಟ್ಟುಕೊಂಡಿದ್ದಾರೆ. ಅಲ್ಲದೆ ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಬೀದಿ ಬದಿ ತಿಂಡಿ-ತಿನಿಸು-ಆಹಾರ ಸಾಮಾಗ್ರಗಳನ್ನು ಮಾರಾಟ ಮಾಡುವ ಅಂಗಡಿ-ಮಳಿಗೆಗಳೂ ಸಾಕಷ್ಟು ಸಂಖ್ಯೆಯಲ್ಲಿ ವ್ಯಾಪಾರ-ವಹಿವಾಟುಗಳನ್ನು ನಡೆಸುತ್ತವೆ.
ಅಲ್ಲದೆ ವಾರಾಂತ್ಯ ದಿನಗಳಲ್ಲಿ ಕ್ರಿಕೆಟ್, ಕಬಡ್ಡಿ ಮೊದಲಾದ ಕ್ರೀಡಾ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಿಗದಿಗೊಂಡಿದ್ದು, ಇಲ್ಲಿ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗುತ್ತಿದೆ. ಸರಕಾರದ ಆದೇಶದ ಪ್ರಕಾರ ನಿರ್ಬಂಧಗಳು ಈ ಎಲ್ಲಾ ಕಾರ್ಯಕ್ರಮಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕಾರ್ಯಕ್ರಮಗಳು ಅನಿಶ್ಚಿತತೆಯನ್ನು ಎದುರಿಸುವಂತಾಗಿದೆ. ಕಾರ್ಯಕ್ರಮಗಳು ಸರಳ ರೀತಿಯಲ್ಲಿ ಆಚರಿಸುವಂತೆ ಸರಕಾರದ ಆದೇಶದ ಪ್ರಕಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸುವ ಸಾಧ್ಯತೆಯನ್ನು ಅಲ್ಲಗಳೆಯುಂತಿಲ್ಲ.
0 comments:
Post a Comment