ನವದೆಹಲಿ (ಕರಾವಳಿ ಟೈಮ್ಸ್) : ಗಲಭೆ ಪೀಡಿತ ಈಶಾನ್ಯ ದೆಹಲಿಗೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿಯಾಗಿ ಪರಿಸ್ಥಿತಿ ಪರಾಮರ್ಶೆ ನಡೆಸಿತು.
ಗಲಭೆಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಶಾಲೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಶಾಲೆ ದೆಹಲಿಯ ಭವಿಷ್ಯ. ದ್ವೇಷ ಮತ್ತು ಹಿಂಸಾಚಾರ ಇಲ್ಲಿನ ಭವಿಷ್ಯವನ್ನು ಸರ್ವನಾಶ ಮಾಡಿದೆ. ಈ ಹಿಂಸಾಚಾರದಿಂದ ಭಾರತ ಮಾತೆಗೆ ಯಾವುದೇ ಪ್ರಯೋಜನ ಇಲ್ಲ. ಮುಂದಿನ ದಿನಗಳಲ್ಲಾದರೂ ಎಲ್ಲರೂ ಒಟ್ಟಿಗೆ ಕೆಲಸ ಮಾಡಿ, ದೇಶ ಮುನ್ನಡೆಸಬೇಕು ಎಂದರಲ್ಲದೆ ಸಾವು-ನೋವುಗಳು ದ್ವೇಷಪೂರಿತ ಮನಸ್ಸುಗಳನ್ನು ಪರಿವರ್ತನೆಗೊಳಿಸಬೇಕು ಎಂದರು.
ಸಂಸತ್ತಿನಲ್ಲಿ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುವವರೆಗೆ ಸಂಸತ್ತಿನ ಹೊರಗೆ ಮತ್ತು ಒಳಗೆ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ರಾಹುಲ್ ಗಾಂಧಿ ಇದೇ ವೇಳೆ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ದಂಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದೆ ಎಂದು ಕಿಡಿಕಾರಿದ ರಾಹುಲ್, ದಂಗೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.
ಪಕ್ಷದ ಕಚೇರಿಯಿಂದ ವಾಹನದಲ್ಲಿ ಹೊರಟ ಕಾಂಗ್ರೆಸ್ ನಾಯಕರ ತಂಡ, ಈಶಾನ್ಯ ದೆಹಲಿಯ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಮಾತನಾಡಿಸಿತು. ಈ ವೇಳೆ ಸಂತ್ರಸ್ಥ ಕಟುಂಬಗಳಿಗೆ ಕಾಂಗ್ರೆಸ್ ನಾಯಕರು ಸಾಂತ್ವನ ಹೇಳಿದರು. ಒಂದು ವಾರದ ಹಿಂದೆ ದೆಹಲಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಕನಿಷ್ಠ 47 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದರು.
0 comments:
Post a Comment