ನವದೆಹಲಿ (ಕರಾವಳಿ ಟೈಮ್ಸ್) : ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಈ ಅವಧಿಯಲ್ಲಿ ಜನರ ಸಂಕಷ್ಟ ನಿವಾರಣೆಗೆ ಕೇಂದ್ರ ಸರಕಾರ ಹೊಸ ಪಡಿತರ ಯೋಜನೆ ಘೋಷಣೆ ಮಾಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಇಡೀ ದೇಶ ಒಪ್ಪಿದೆ. ಮಾರಕ ಕೊರೋನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಅತಿ ಮುಖ್ಯವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ನಿತ್ಯ ಅಗತ್ಯ ಸಾಮಗ್ರಿಗಳು ಲಭ್ಯವಿರುತ್ತದೆ. ಸಾಮಾಗ್ರಿಗಳನ್ನು ಕೊಳ್ಳುವಾಗ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದಾರೆ. ಇನ್ನು ಕೋವಿಡ್ 19 ಸಂಬಂಧಿತ ಜಿಲ್ಲಾವಾರು ಹೆಲ್ಪ್ ಲೈನ್ ತೆರೆಯಲೂ ಸಹ ನಿರ್ಧರಿಸಲಾಗಿದೆ ಎಂದರು.
ಇದೇ ವೇಳೆ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ಜನತೆಗೆ ವಿಶೇಷ ಪಡಿತರ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಈ ಯೋಜನೆಯ ಅನ್ವಯ 80 ಕೋಟಿ ಪಡಿತರದಾರರಿಗೆ ಪ್ರತೀ ಕೆ.ಜಿ.ಗೆ 2 ರೂಪಾಯಿ ದರದಲ್ಲಿ ಗೋಧಿ ಹಾಗೂ ಪ್ರತೀ ಕೆ.ಜಿ.ಗೆ 3 ರೂಪಾಯಿ ದರದಲ್ಲಿ ಅಕ್ಕಿಯನ್ನು ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಕಟ್ಟಡ ಕಾರ್ಮಿಕರಿಗೆ ಉಚಿತ ಊಟವನ್ನು ಪೂರೈಸುವ ನಿರ್ಧಾರಕ್ಕೂ ಕೇಂದ್ರ ಸರ್ಕಾರ ಬಂದಿದೆ. ಮೂರು ತಿಂಗಳ ಪಡಿತರವನ್ನು ಮುಂಗಡವಾಗಿಯೇ ನೀಡಲು ನಿರ್ಧರಿಸಲಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯ ವೇತನ ನೀಡಲು ಸೂಚಿಸಲಾಗಿದೆ. ಕಾಳಸಂತೆಯಲ್ಲಿ ದಿನಸಿ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಸಚಿವ ಜಾವೇಡೇಕರ್ ಜನರಿಗೆ ಪಡಿತರವನ್ನು ಸಿಗುವಂತೆ ಮಾಡುವ ಮತ್ತು ಇನ್ನಿತರ ಸವಲತ್ತುಗಳನ್ನು ಜನರಿಗೆ ತಲುಪಿಸುವುದಕ್ಕೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ದಿನದ ಅಂತ್ಯದೊಳಗೆ ಸರಕಾರ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ ಎಂದರು.
ಇನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 1,340 ಕೋಟಿ ರೂಪಾಯಿಗಳ ನಿಧಿ ಬಿಡುಗಡೆ ಮಾಡಿದ್ದು, ಗ್ರಾಮೀಣ ಭಾಗದ ಜನರು ಇದರ ಉಪಯೋಗ ಮಾಡಿಕೊಳ್ಳಬಹುದು.
ವೈದ್ಯರು, ಪತ್ರಕರ್ತರು ಮತ್ತು ಇ ಕಾಮರ್ಸ್ ಸಿಬ್ಬಂದಿಗಳ ಕಾರ್ಯಕ್ಕೆ ತಡೆ ಬೇಡ
ಇದೇ ವೇಳೆ ವೈದ್ಯರು, ಪತ್ರಕರ್ತರು ಮತ್ತು ಇ ಕಾಮರ್ಸ್ ಸಿಬ್ಬಂದಿಗಳ ಕಾರ್ಯಕ್ಕೆ ತಡೆ ಬೇಡ ಎಂದು ಹೇಳಿರುವ ಸಚಿವ ಜಾವಡೇಕರ್, ಕೊರೋನಾ ವೈರಸ್ ನಿಯಂತ್ರಣದ ಈ ಹೋರಾಟದಲ್ಲಿ ಇವರ ಸೇವೆ ಶ್ಲಾಘನೀಯ ಎಂದರು.
0 comments:
Post a Comment