ಬೆಳಗಾವಿ (ಕರಾವಳಿ ಟೈಮ್ಸ್) : ಮಾರಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರಕಾರ ಮೊನ್ನೆಯಷ್ಟೆ ಒಂದು ವಾರ ಕಾಲ ತುರ್ತು ನಿಗಾ ಪರಿಸ್ಥಿತಿ ಘೋಷಿಸಿದ್ದು, ಮಾಲ್, ಚಿತ್ರಮಂದಿರ ಸಹಿತ ಶಾಲಾ-ಕಾಲೇಜುಗಳಿಗೆ ನಿರ್ಬಂಧ ವಿಧಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಸಭೆ-ಸಮಾರಂಭ, ಕಾರ್ಯಕ್ರಮಗಳೆಲ್ಲದಕ್ಕೂ ಕಡಿವಾಣ ಹಾಕುವಂತೆ ಸರಕಾರ ಆದೇಶಿಸಿತ್ತು.
ಆದರೆ ಸರ್ಕಾರದ ನಿರ್ದೇಶನ ಉಲ್ಲಂಘಿಸಿ ಮೇಲ್ಮನೆಯ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ಭಾನುವಾರ ನಡೆದಿದ್ದು, ಮದುವೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹಿತ ಹಲವು ಬಿಜೆಪಿ ಪ್ರಮುಖರು ಪಾಲ್ಗೊಂಡು ವದು ವರರನ್ನು ಆಶಿರ್ವದಿಸಿದ್ದಾರೆ.
ಬೆಳಗಾವಿಯ ಶಗುನ ಗಾರ್ಡನ್‍ನಲ್ಲಿ ಕವಟಗಿಮಠ ಪುತ್ರಿಯ ವಿವಾಹ ನೆರವೇರಿದ್ದು, ಯಡಿಯೂರಪ್ಪ ಮದುವೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಹಿಂದೆ ಅವರ ಭದ್ರತೆ, ಶಿಷ್ಟಾಚಾರ ಸಿಬ್ಬಂದಿ ಕೂಡಾ ಪಾಲ್ಗೊಂಡಿದ್ದರು. ಮದುವೆ ಸಮಾರಂಭದಲ್ಲಿ ಸುಮಾರು ನಾಲ್ಕೈದು ಸಾವಿರ ಮಂದಿ ಭಾಗವಹಿಸಿದ್ದು, ಸರಕಾರ ನೀಡಿರುವ ಆದೇಶ ಮೀರಿದ ರೀತಿಯಲ್ಲಿ ನಡೆದಿತ್ತು.
ವಿವಾಹ ಮಹೋತ್ಸವದಲ್ಲಿ ಸರ್ಕಾರದ ನಿರ್ದೇಶನ ಮೀರಿ ವಿವಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸ್ವತಃ ಯಡಿಯೂರಪ್ಪ ನುಣುಚಿಕೊಂಡ ಘಟನೆಯೂ ನಡೆದಿದೆ.
0 comments:
Post a Comment