ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಸಮೀಪದ ಪಳಿಕೆ-ಕಾಗೆಕಾನ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (31) ಗುರುವಾರ ಬರಿಮಾರು ಸಮೀಪದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗುರುವಾರ ಅಪರಾಹ್ನದ ವೇಳೆಗೆ ರಹಿಮಾನ್ ಅವರು ತನ್ನ ಮೂವರು ಸ್ನೇಹಿತರೊಂದಿಗೆ ಬರಿಮಾರು ಕಡವಿನಬಾಗಿಲು ಬಳಿ ನದಿ ನೀರಿನಲ್ಲಿ ಈಜಲು ತೆರಳಿದ್ದರು. ಈಜಾಟದ ವೇಳೆ ರಹಿಮಾನ್ ನೀರಿನಲ್ಲಿ ಆಯತಪ್ಪಿ ಮುಳುಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ನೇಹಿತರು ಆತನ ರಕ್ಷಣೆಗೆ ಪ್ರಯತ್ನಿಸಿದರಾದರೂ ಫಲಕಾರಿಯಾಗದೆ ಆತ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದ ರಹಿಮಾನ್ ಇತ್ತೀಚೆಗಷ್ಟೆ ಊರಿಗೆ ಬಂದು ಸೆಟ್ಲ್ ಆಗಿದ್ದ ಎನ್ನಲಾಗಿದೆ.
ಬಳಿಕ ಸಂಜೆಯ ವೇಳೆಗೆ ಗೂಡಿನಬಳಿ ನಿವಾಸಿ, ಈಜುಪಟು ಮುಹಮ್ಮದ್ ನದಿಯಲ್ಲಿ ಮುಳುಗಿ ಮೃತದೇಹವನ್ನು ಮೇಲೆತ್ತುವಲ್ಲಿ ಸಫಲರಾಗಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment