ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಎಸ್ ವಿ ಎಸ್ ಕಾಲೇಜು ದ್ವೀತಿಯ ಪಿಯುಸಿ ವಿದ್ಯಾರ್ಥಿ, ತಾಲೂಕಿನ ವಗ್ಗ ಸಮೀಪದ ಕಾರಿಂಜಕೋಡಿ ಎಂಬಲ್ಲಿನ ನಿವಾಸಿ, ಅರವಿಂದ ರಾವ್ ಅವರ ಪುತ್ರ ನಂದನ್ ಎಂಬಾತನ ಪರೀಕ್ಷಾ ವಿಷಯ ಕಠಿಣವಿದ್ದು, ಅಂಕ ಕಡಿಮೆಯಾಗಬಹುದು ಎಂಬ ಆತಂಕದಿಂದ ಶುಕ್ರವಾರ ಮಧ್ಯರಾತ್ರಿ ವೇಳೆಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಸ್ ವಿ ಎಸ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಸ್ಸೆಸ್ಸೆಲ್ಸಿಯಲ್ಲೂ 94 ಶೇಕಡಾ ಅಂಕ ಪಡೆದಿದ್ದ. ಪಿಯುಸಿಯಲ್ಲೂ ಅದೇ ಶೇಕಡಾವಾರು ಅಂಕಗಳನ್ನು ಮುಂದುವರಿಸಬೇಕೆಂಬ ಇರಾದೆಯಲ್ಲಿದ್ದ ಈತ ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ವಿಷಯವಾಗಿರುವ ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ. ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಕಠಿಣವಾಗಿದ್ದು, ಅಂಕ ಗಳಿಕೆ ಕಡಿಮೆಯಾಗಬಹುದು ಎಂಬ ಆತಂಕದಲ್ಲಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಶುಕ್ರವಾರ ರಾತ್ರಿ 12 ಗಂಟೆಯವರೆಗೂ ವಿದ್ಯಾರ್ಥಿ ನಂದನ್ ಪಠಣದಲ್ಲೇ ಮಗ್ನನಾಗಿದ್ದ. ಆದರೆ ರಾತ್ರಿ 12.30ಕ್ಕೆ ಈತನ ತಾಯಿ ನೋಡುವಾಗ ಈತ ಮನೆಯಲ್ಲಿರಲಿಲ್ಲ. ತಕ್ಷಣ ಮನೆ ಮಂದಿ ಹುಡುಕಾಟ ಆರಂಭಿಸಿದ್ದು, ಆತನ ಮೊಬೈಲ್ ತೋಟದಲ್ಲಿ ಪತ್ತೆಯಾಗಿದೆ. ಹುಡುಕಾಟ ಮುಂದುವರೆಸಿದಾಗ ಸಮೀಪದ ಬಾವಿಯಲ್ಲಿ ನಂದನ್ ಮೃತದೇಹ ಪತ್ತೆಯಾಗಿದೆ.
ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
0 comments:
Post a Comment