ಬಂಟ್ವಾಳದಲ್ಲಿ ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ
ಕಾಂಗ್ರೆಸ್ ಅತಿ ದೊಡ್ಡ ಪಕ್ಷ, ಸಂಸದ-ಶಾಸಕರ ಮತದಿಂದ ಬಿಜೆಪಿ ಮೇಲುಗೈ, ಎಸ್.ಡಿ.ಪಿ.ಐ. ನಿರ್ಣಾಯಕ
ಬಂಟವಾಳ ಪುರಸಭೆಯ ಮಹಿಳಾ ಸದಸ್ಯೆಯರು |
ಸರಕಾರದ ಮೀಸಲಾತಿ ಆದೇಶ
ಬಂಟವಾಳ ಪುರಸಭೆಯ ಹೊರನೋಟ |
ಬಂಟ್ವಾಳ (ಕರಾವಳಿ ಟೈಮ್ಸ್) : ಚುನಾವಣೆ ನಡೆದು ಬರೋಬ್ಬರಿ 19 ತಿಂಗಳ ಬಳಿಕ ಬಂಟ್ವಾಳ ಪುರಸಭೆಗೆ ಕೊನೆಗೂ ಚುನಾಯಿತ ಜನಪ್ರತಿನಿಧಿಗಳ ಆಡಳಿತಕ್ಕೆ ಮುಹೂರ್ತ ನಿಗದಿಯಾಗಿದೆ. ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಸರಕಾರ ಬುಧವಾರ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿಸಿದ್ದು, ಮತ್ತೊಮ್ಮೆ ಬಂಟ್ವಾಳದಲ್ಲಿ ಮಹಿಳಾಮಣಿಗಳ ರಾಜ್ಯಭಾರ ನಡೆಯಲಿದೆ.
2018ರ ಆಗಸ್ಟ್ 29 ರಂದು ಬಂಟ್ವಾಳ ಪುರಸಭಾ ಚುನಾವಣೆ ನಡೆದು ಸೆ. ೩ ರಂದು ಮತ್ ಎಣಿಕೆ ನಡೆದಿತ್ತು. ಕಳೆದ 19 ತಿಂಗಳಿನಿಂದ ಚುನಾಯಿತ ಪ್ರತಿನಿಧಿಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು, ಅಧಿಕಾರಿ ಇಲ್ಲದೆ ಜನರ ಬವಣೆಗೆ ಸ್ಪಂದಿಸುವ ಯಾವುದೇ ಉತ್ಸಾಹ ಪ್ರತಿನಿಧಿಗಳಲ್ಲಿರಲಿಲ್ಲ. ಮಂಗಳೂರು ಸಹಾಯಕ ಆಯುಕ್ತರು ಆಡಳಿತಾಧಿಕಾರಿಯಾಗಿ ಅಧಿಕಾರ ಚಲಾಯಿಸುತ್ತಿದ್ದರು.
ಬಂಟ್ವಾಳ ಪುರಸಭೆಯ ಒಟ್ಟು 27 ಸ್ಥಾನಗಳ ಪೈಕಿ ಕಾಂಗ್ರೇಸ್ 12, ಬಿಜೆಪಿ 11, ಹಾಗೂ ಎಸ್ ಡಿ ಪಿ ಐ ಪಕ್ಷದ 4 ಮಂದಿ ಚುನಾಯಿತರಾಗುವ ಮೂಲಕ ಯಾವುದೇ ಪಕ್ಷಗಳಿಗೂ ಜನ ಸ್ಪಷ್ಟ ಜನಾದೇಶ ನೀಡಿರಲಿಲ್ಲ. ಈ ಮಧ್ಯೆ ಬಿಜೆಪಿ ಪಕ್ಷಕ್ಕೆ ಸಂಸದ ಹಾಗೂ ಶಾಸಕರ ಮತಗಳು ಲೆಕ್ಕಕ್ಕೆ ಬರುತ್ತಿದ್ದು, ಅದು ತನ್ನ ಒಟ್ಟು ಗಳಿಕೆಯನ್ನು 13ಕ್ಕೇರಿಸಿಕೊಂಡಿದೆ. ಆದರೆ ಅಧಿಕಾರ ಯಾರ ಪಾಲಿಗೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.
ಈಗಾಗಲೇ ಬಂಟ್ವಾಳದ ಮಟ್ಟಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಗಿರುವ ಮಾಜಿ ಸಚಿವ ಬಿ ರಮಾನಾಥ ರೈ ಅವರು ಎರಡೂ ಕೋಮುವಾದಿ ಪಕ್ಷಗಳಿಂದ ಕಾಂಗ್ರೆಸ್ ಸಮಾನ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದು, ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷಗಳೊಂದಿಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಈ ಹಿಂದಿನ ಎಲ್ಲಾ ಚುನಾವಣಾ ಸಮಯಗಳಲ್ಲೂ ಸ್ಪಷ್ಟವಾಗಿ ಸಾರಿದ್ದರು. ಇತ್ತ ಬಿಜೆಪಿ ಕೂಡಾ ಎಸ್ ಡಿ ಪಿ ಐ ಜೊತೆ ಹೊಂದಾಣಿಕೆ ಮಾಡುವುದು ಸಾಧ್ಯವಿಲ್ಲ ಎನ್ನುತ್ತಿದೆ. ಈ ಕಾರಣಕ್ಕಾಗಿ ಪುರಸಭೆಯ ಅಧಿಕಾರ ಯಾವ ಮಡಿಲಿಗೆ ಸೇರಲಿದೆ ಎಂಬುದು ಸದ್ಯದ ಕುತೂಹಲ. ಎಸ್ ಡಿ ಪಿ ಐ ಪಕ್ಷದ ಸದಸ್ಯರು ತಟಸ್ಥರಾಗುತ್ತಾರೋ ಅಥವಾ ಯಾವ ಪಕ್ಷದ ಅಭ್ಯರ್ಥಿಗೆ ಬಾಹ್ಯ ಬೆಂಬಲ ಪ್ರಕಟಿಸುತ್ತಾರೋ ಕಾದು ನೋಡಬೇಕಿದೆ. ಒಂದು ವೇಳೆ ತಟಸ್ಥತೆ ಪ್ರಕಟಿಸಿದರೆ ಬಿಜೆಪಿ ಆಡಳಿತ ನಡೆಸುವುದು ಖಚಿತವಾಗಲಿದೆ. ಅಥವಾ ಇನ್ನೇನಾದರೂ ಆಪರೇಶನ್‍ಗಳು ಬಂಟ್ವಾಳದಲ್ಲಿ ನಡೆದರೆ ಆಡಳಿತ ಸ್ಥಿತ್ಯಂತರ ನಡೆಯುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಯಾವ ಬೆಳವಣಿಗೆಗಳು ನಡೆಯುವುದನ್ನೂ ಅಲ್ಲಗಳೆಯುವಂತಿಲ್ಲ ಎಂಬುದಕ್ಕೆ ಇತ್ತೀಚೆಗಿನ ರಾಷ್ಟ್ರಮಟ್ಟದ ಬೆಳವಣಿಗೆಗಳನ್ನು ಗಮನಿಸುವಾಗ ಕಂಡುಬರುವ ಸನ್ನಿವೇಶವಾಗಿದೆ.
ಬಂಟ್ವಾಳ ಪುರಸಭೆಯ ಆಧ್ಯಕ್ಷ-ಉಪಾಧ್ಯಕ್ಷ ಎರಡೂ ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿರುವುದರಿಂದ ಮೂರೂ ಪಕ್ಷಗಳಿಗೆ ಸೇರಿದ ಒಟ್ಟು 27 ಸದಸ್ಯರ ಪೈಕಿ ಪೈಕಿ ಒಟ್ಟು 12 ಮಂದಿ ಮಹಿಳಾ ಸದಸ್ಯರಿದ್ದಾರೆ. ಎಲ್ಲ ಮಹಿಳೆಯರೂ ಕೂಡಾ ಅಧ್ಯಕ್ಷಗಾದಿಗೆ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಬಿಜೆಪಿಯಿಂದ ಮೀನಾಕ್ಷಿ ಗೌಡ ಹಾಗೂ ಕಾಂಗ್ರೆಸ್ಸಿನಿಂದ ಜೆಸಿಂತಾ ಡಿ’ಸೋಜ ಇಬ್ಬರು ಮಾತ್ರ ಅರ್ಹರಾಗಿರುತ್ತಾರೆ.
ಕಳೆದ 2013 ರಲ್ಲಿ ಬಂಟ್ವಾಳ ಪುರಸಭೆಯಲ್ಲಿ ಮೀಸಲಾತಿ ಪ್ರಕಾರ ಕಾಂಗ್ರೆಸ್ಸಿನ ವಸಂತಿ ಚಂದಪ್ಪ ಹಾಗೂ ಯಾಸ್ಮೀನ್ ಹಾಮದ್ ಅವರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಮಹಿಳಾ ರಾಜ್ಯಭಾರ ಮಾಡಿದ್ದರು. ಇದೀಗ ಏಳು ವರ್ಷಗಳ ಬಳಿಕ ಮತ್ತೆ ಬಂಟ್ವಾಳ ಪುರಸಭೆಯಲ್ಲಿ ಮಹಿಳಾ ದರ್ಬಾರ್ ಕಂಡುಬರಲಿದೆ.
0 comments:
Post a Comment