ಬಂಟ್ವಾಳ (ಕರಾವಳಿ ಟೈಮ್ಸ್) : ದುಬೈಯಿಂದ ನಿನ್ನೆ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಉಳ್ಳಾಲ ನಿವಾಸಿ ಅವರನ್ನು ತಪಾಸಣೆ ನಡೆಸುವ ಸಂದರ್ಭ ಜ್ವರ ಕಂಡು ಬಂದ ಹಿನ್ನಲೆಯಲ್ಲಿ ಹೆಚ್ಚಿನ ತಪಾಸಣೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಳಿಕ ಆತ ಅಲ್ಲಿಂದ ಹೇಳದೆ ತೆರಳಿದ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಈತ ವಿಟ್ಲ ಸಮೀಪದ ಬೊಬ್ಬೆಕೇರಿಯ ತನ್ನ ಪತ್ನಿ ಮನೆಯಲ್ಲಿರುವುದನ್ನು ಪತ್ತೆ ಹಚ್ಚಿನ ಅಧಿಕಾರಿಗಳು ಆತನ ಮನವೊಲಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಮಧ್ಯರಾತ್ರಿ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರನ್ನು ವಿಮಾನ ನಿಲ್ದಾಣದಲ್ಲಿ ಇದೀಗ ಶಂಕಿತ ಕೊರೊನಾ ವೈರಸ್ ಪತ್ತೆಗಾಗಿ ವ್ಯವಸ್ಥೆಗೊಳಿಸಲಾಗಿರುವ ಸ್ಕ್ರೀನಿಂಗ್ ಮೂಲಕ ಟೆಂಪರೇಚರ್ ಪರೀಕ್ಷಿಸಲಾಗಿತ್ತು. ಈ ವೇಳೆ ಈತನಿಗೆ ಸ್ವಲ್ಪ ಮಟ್ಟಿನ ಜ್ವರ ಬಾಧಿಸಿರುವುದು ಪತ್ತೆಯಾಗಿದೆ. ಇದರಿಂದ ಅಧಿಕಾರಿಗಳು ಈತನನ್ನು ಶಂಕಿತ ವೈರಸ್ ಬಗ್ಗೆ ಪರಿಶೀಲನೆ ನಡೆಸಲು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದ್ದರು. ಅಲ್ಲಿ ಆತನ ರಕ್ತ ಮಾದರಿ ಪರೀಕ್ಷೆ ನಡೆಸುವ ಮುನ್ನವೇ ಆತ ಅಲ್ಲಿಂದ ಯಾರಿಗೂ ಹೇಳದೆ ತೆರಳಿದ್ದು ದಿನವಿಡೀ ಹೈಡ್ರಾಮಾ ಸೃಷ್ಟಿಸುವಂತೆ ಮಾಡಿತ್ತು.
ಆಸ್ಪತ್ರೆಯಿಂದ ಹೇಳದೆ ತೆರಳಿದ್ದ ಅವರ ಹುಡುಕಾಟಕ್ಕೆ ಆತನ ಮನೆ ಹುಡುಕಿ ತೆರಳಿದ್ದ ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ತಂಡಕ್ಕೆ ಮನೆ ಮಂದಿ ಸಹಕರಿಸದ ಹಿನ್ನಲೆಯಲ್ಲಿ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದರು. ಬಳಿಕ ಅವರು ವಿಟ್ಲ ಸಮೀಪದ ಬೊಬ್ಬೆಕೇರಿಯಲ್ಲಿರುವ ತನ್ನ ಪತ್ನಿ ಮನೆಯಲ್ಲಿರುವುದರ ಬಗ್ಗೆ ಮಾಹಿತಿ ಪಡೆದ ವಿಟ್ಲ ಪೊಲೀಸರು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಬಳಿಕ ಸ್ಥಳಕ್ಕೆ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು ನೇತೃತ್ವದ ಆರೋಗ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ನೇತೃತ್ವದ ಕಂದಾಯ ಅಧಿಕಾರಿಗಳು ತೆರಳಿ ಅಝರುದ್ದೀನ್ ಹಾಗೂ ಮನೆ ಮಂದಿಯ ಮನವೊಲಿಸಿ ಕೊನೆಗೂ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತಪಾಸಣೆಗಾಗಿ ದಾಖಲಿಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ದೊಡ್ಡ ಮಟ್ಟದ ಶಂಕಿತ ಕೊರೊನಾ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ. ಅಧಿಕಾರಿಗಳು ಮನೆಗೆ ತೆರಳಿದ ವೇಳೆ ಮನೆ ಮಂದಿ ಹಾಗೂ ಸ್ಥಳೀಯರು ಅಧಿಕಾರಿಗಳೊಂದಿಗೆ ಸ್ಪಂದಿಸದ ಕಾರಣದಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ವಿಟ್ಲ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಆರೋಗ್ಯಾಧಿಕಾರಿ ಡಾ ದೀಪಾ ಪ್ರಭು ವಿದೇಶದಿಂದ ಬರುವ ಮಂದಿಗೆ ಜ್ವರ ಇದ್ದರೆ ಸರಕಾರದ ಆದೇಶದಂತೆ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ದುಬೈಯಿಂದ ಬಂದ ವ್ಯಕ್ತಿಗೆ ಸ್ವಲ್ಪ ಮಟ್ಟಿನ ಜ್ವರ ಇದ್ದುದರಿಂದ ವಿಮಾನ ನಿಲ್ದಾಣ ಅಧಿಕಾರಿಗಳು ಸ್ಕ್ರೀನಿಂಗ್ ಟೆಂಪರೇಚರ್ ಪರಿಶೀಲನೆ ವೇಳೆ ಪತ್ತೆ ಹಚ್ಚಿದ್ದು, ಹೆಚ್ಚಿನ ತಪಾಸಣೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ರಕ್ತ ಮಾದರಿ ಪರೀಕ್ಷೆ ನಡೆಸದೆ ಆತ ತಪ್ಪಿಸಿಕೊಂಡು ಬಂದುದರಿಂದ ಗೊಂದಲ ನಿರ್ಮಾಣವಾಗಿದೆಯಷ್ಟೆ. ಇದೀಗ ಆತನ ಮನವೊಲಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ವಾರ್ಡಿನಲ್ಲಿರಿಸಲಾಗಿದೆ. ಆತನ ರಕ್ತ ಪರೀಕ್ಷೆ ಮಾಡಿ, ಕಫದ ಮಾದರಿ ಹಾಗೂ ಗಂಟಲು ಮಾದರಿಯನ್ನು ಪರೀಕ್ಷೆಗಾಗಿ ಕಳಿಸಲಾಗಿದ್ದು, ಇದರ ವರದಿ ಬರಲು 48 ಗಂಟೆ ಕಾಲಾವಕಾಶ ಬೇಕಿದೆ. ಅಲ್ಲಿಯವರೆಗೂ ಆತನನ್ನು ಐಸೊಲೇಶನ್ ಘಟಕದಲ್ಲಿಟ್ಟು ನಿಗಾ ವಹಿಸಲಾಗುವುದು. ಇದೀಗ ಜ್ವರ ಕಡಿಮೆಯಾಗಿದ್ದು, ಯಾವುದೇ ಅಪಾಯದ ಬಗ್ಗೆ ಸೂಚನೆಗಳು ಕಂಡು ಬರುತ್ತಿಲ್ಲ. ಪರೀಕ್ಷಾ ವರದಿ ಬಂದ ಬಳಿಕ ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
0 comments:
Post a Comment