ಬಂಟ್ವಾಳ ತಹಶೀಲ್ದಾರ್ ಸೂಚನೆ ಬಳಿಕವೂ ಕೆಲಸ ಮುಂದುವರಿಸಿದ ಕಾರ್ಖಾನೆ
ಬಂಟ್ವಾಳ (ಕರಾವಳಿ ಟೈಮ್ಸ್) : ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಟ್ಟುನಿಟ್ಟಿನ ಲಾಕ್‍ಡೌನ್ ಆದೇಶಗಳನ್ನು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸಮರ್ಪಕವಾಗಿ ಜಾರಿಗೊಳಿಸಿ ನಿಭಾಯಿಸುತ್ತಿರುವ ಮಧ್ಯೆಯೇ ಬಂಟ್ವಾಳ ತಾಲೂಕಿನ ವಾಮಪದವು ಸಮೀಪದ ಅಗತ್ಯ ಸೇವೆಯಲ್ಲದ ಕಾರ್ಖಾನೆಯೊಂದು ಯಾರ ಭಯವೂ ಇಲ್ಲದೆ ಮಹಿಳಾ ಕಾರ್ಮಿಕರನ್ನು ಒಳಗೆ ಕೂಡಿಹಾಕಿ ರಾಜಾರೋಷವಾಗಿ ಉದ್ಯಮ ನಡೆಸಲಾಗುತ್ತಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರಿಕೊಂಡಿದ್ದು, ಉಳ್ಳವರಿಗೊಂದು ಕಾನೂನು, ಬಡವರಿಗೊಂದು ಕಾನೂನು ಎಂಬಂತಾಗಿದೆ ಸರಕಾರದ ನಿಯಮ ಎಂದು ಆಕ್ಷೇಪಿಸಿದ್ದಾರೆ.
ಅಗತ್ಯ ಸೇವೆಗಳಾದ ಅಕ್ಕಿ, ಎಣ್ಣೆ ಮೊದಲಾದ ಕಾರ್ಖಾನೆಗಳು ಜನರ ಅಗತ್ಯ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ರಿಯಾತಿ ನೀಡಲಾಗಿದ್ದರೂ ಅದರಲ್ಲೂ ಕಾರ್ಮಿಕರ ಸಂಖ್ಯೆಯನ್ನು ಅರ್ಧಾಂಶದಷ್ಟು ಕಡಿತಗೊಳಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ಸರಕಾರ ರೂಪಿಸಿದೆ. ಆದರೆ ಇಲ್ಲಿನ ಕಾರ್ಖಾನೆ ಯಾವುದೇ ಅಗತ್ಯ ಸೇವೆ ಅಲ್ಲದಾಗಿದ್ದು, ಕೇವಲ ಉದ್ಯಮ ಉದ್ದೇಶ ಮಾತ್ರ ಹೊಂದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮಹಿಳಾ ಕಾರ್ಮಿಕರನ್ನು ಕಾರ್ಖಾನೆ ಮಾಲಕರು ಬಸ್ಸಿನಲ್ಲಿ ಕರೆದುಕೊಂಡು ಬಂದು ಕಾರ್ಖಾನೆಯ ಒಳಗೆ ಬಂಧಿ ಹಾಕಿ ಮುಖ್ಯ ಗೇಟಿಗೆ ಬೀಗ ಜಡಿದು ಉದ್ಯಮ ನಡೆಸಲಾಗುತ್ತಿದೆ. ಅಲ್ಲದೆ ಕಾರ್ಖಾನೆಯ ಕೊಳವೆಯ ಮೂಲಕ ದಟ್ಟ ಹೊಗೆ ಪರಿಸರದಲ್ಲಿ ಹಬ್ಬಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಾರ್ಖಾನೆ ಕಾರ್ಮಿಕ ಮಹಿಳೆಯರೇ ಸರಕಾರದ ಆದೇಶ ಉಲ್ಲಂಘಿಸಿ ರಜೆ ನೀಡದೆ ದುಡಿಸಿಕೊಳ್ಳಲಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರ ದೂರಿನಂತೆ ಪೊಲೀಸರು ಹಾಗೂ ತಾಲೂಕು ತಹಶೀಲ್ದಾರರು ದಾಳಿ ನಡೆಸಿ ಉದ್ಯಮ ನಿಲ್ಲಿಸುವಂತೆ ಸೂಚಿಸಿ ಬಂದಿದ್ದಾರೆ ಎನ್ನಲಾಗಿದೆ. ಆದರೆ ಆ ಬಳಿಕವೂ ಕಾರ್ಖಾನೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಮಹಿಳಾ ಕಾರ್ಮಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರು ಅಗತ್ಯ ಸೇವೆಗಳಾದ ಅಕ್ಕಿ, ಎಣ್ಣೆ ಇಂತಹವುಗಳನ್ನು ಹೊರತುಪಡಿಸಿ ಇತರ ಯಾವುದೇ ಕಾರ್ಖಾನೆ, ಮಿಲ್‍ಗಳು ಕಾರ್ಯಾಚರಿಸುವಂತಿಲ್ಲ ಎಂದಿದ್ದಾರೆ.
0 comments:
Post a Comment