ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಕೆಳಗಿನಪೇಟೆಯಲ್ಲಿ ಗುರುವಾರ ಲಘು ಪಾನೀಯ ಸಾಗಾಟದ ಪಿಕಪ್ ವಾಹನ ಹಾಗೂ ಅಟೋ ರಿಕ್ಷಾ ಡಿಕ್ಕಿಯಾಗಿ ಚಾಲಕರ ಸಹಿತ ಐದು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿ ಸಿ ರೋಡಿನಿಂದ ಬಂಟ್ವಾಳ ಕಡೆಗೆ ಸಾಫ್ಟ್ ಡ್ರಿಂಕ್ಸ್ ಬಾಟ್ಲಿಗಳನ್ನು ಹೇರಿಕೊಂಡು ಬಂದ ಪಿಕಪ್ ವಾಹನ ಬಂಟ್ವಾಳದಿಂದ ಬಿ ಸಿ ರೋಡು ಕಡೆಗೆ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ಬಳಿಕ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಮಧ್ಯದಲ್ಲೇ ಉರುಳಿ ಬಿದ್ದಿದೆ. ಪರಿಣಾಮ ರಿಕ್ಷಾ ಚಾಲಕ ಪರ್ಲ ನಿವಾಸಿ ಜೆರಾಲ್ಡ್ ಸಾಂಕ್ತಿಸ್, ಪಿಕಪ್ ಚಾಲಕ ಗೌತಮ್ ಹಾಗೂ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎನ್ನಲಾಗಿದೆ.
ರಸ್ತೆಯಲ್ಲೇ ಪಿಕಪ್ ಉರುಳಿ ಬಿದ್ದ ಪರಿಣಾಮ ಲಘು ಪಾನೀಯ ಬಾಟ್ಲಿಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದ ಪರಿಣಾಮ ಕೆಲ ಕಾಲ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಬಳಿಕ ಸ್ಥಳೀಯರು ಸೇರಿಕೊಂಡು ರಸ್ತೆಯಲ್ಲಿ ಬಿದ್ದಿದ್ದ ಬಾಟ್ಲಿಗಳನ್ನು ತೆರವುಗೊಳಿಸಲು ನೆರವಾದರು. ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರಲ್ಲದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment