ಬಂಟ್ವಾಳ (ಕರಾವಳಿ ಟೈಮ್ಸ್) : ಡಿಜಿಟಲ್ ಯುಗಕ್ಕೆ ಮಕ್ಕಳನ್ನು ಹೊಂದಿಸಿಕೊಳ್ಳುವ ಧಾವಂತದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮಾನವೀಯ ಮೌಲ್ಯಗಳಿಂದ ಹಾಗೂ ಧಾರ್ಮಿಕ ವಿಜ್ಞಾನಗಳಿಂದ ವಂಚಿತರಾಗಿಸುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳೆದು ಬರುತ್ತಿದೆ. ಇಂದಿನ ಸರ್ವ ಕರಾಳ ಪರಿಸ್ಥಿತಿಗಳಿಗೂ ಇದುವೇ ಪ್ರಮುಖ ಕಾರಣವಾಗುತ್ತಿದೆ ಎಂದು ಸಯ್ಯಿದ್ ಹುಸೈನ್ ಬಾ ಅಲವಿ ತಂಙಳ್ ಕುಕ್ಕಾಜೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿ ಬಳಿ ಮರ್‍ಹೂಂ ಶೈಖುನಾ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ ಆಶ್ರಯದಲ್ಲಿ ಶನಿವಾರ ರಾತ್ರಿ (ಮಾ 7) ನಡೆದ ಮಜ್ಲಿಸುನ್ನೂರ್ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದುವಾಶೀರ್ವಚನಗೈದು ಮಾತನಾಡಿದ ಅವರು ಆಧುನಿಕ ಡಿಜಿಟಲ್ ಉಪಕರಣ ಬಳಸಿ ಜೀವನ ಕ್ರಮವನ್ನೇ ಶೈತಾನೀ ಮಾರ್ಗದಲ್ಲಿ ಕಳೆಯುವ ಯುವ ಜನಾಂಗ ಜೀವನದಲ್ಲಿ ಸಂಧಿಗ್ಧ ಪರಿಸ್ಥಿತಿ ತಲೆದೋರಿದಾಗ ಮಾತ್ರ ಧಾರ್ಮಿಕ ನೆಲೆಗಟ್ಟಿಗೆ ಮರಳಲು ಪ್ರಯತ್ನಿಸುವ ವಿಫಲ ಯತ್ನ ನಡೆಸುತ್ತಾರೆ. ಇದು ಸರಿಯಲ್ಲ. ಜೀವನದುದ್ದಕ್ಕೂ ಭಗವಂತ ಹಾಗೂ ಧರ್ಮ ಕಲ್ಪಿಸಿದ ಸರಿಯಾದ ಹಾದಿಯಲ್ಲಿ ಸಾಗಿದಾಗ ಜೀವನದ ಯಶಸ್ಸಿನೊಂದಿಗೆ ಇಹ-ಪರ ವಿಜಯ ಸಾಧ್ಯ ಎಂದು ಸಾರಿದರು.
ಯುವ ಜನಾಂಗ ಯೌವನಾವಸ್ಥೆಯಲ್ಲಿ ಪ್ರೇಮ, ಸರಪ-ಸಲ್ಲಾಪಗಳಿಗೆ ಬಲಿ ಬಿದ್ದು, ಅಂತಿಮವಾಗಿ ನಿಕಾಹ್ ಎಂಬ ಅನುವದನೀಯ ಮುದ್ರೆಯೊತ್ತಿದರೂ ಇದನ್ನು ಧರ್ಮ ಬದ್ದ ಎನ್ನಲು ಸಾಧ್ಯವಿಲ್ಲ. ಪ್ರೇಮಾಂಕುರದಿಂದ ವಿವಾಹದ ನಡುವಿನ ಈ ನಡುವಿನ ಅವಧಿಯಲ್ಲಿ ಯುವ ಸಮೂಹ ತೊಡಗಿಸಿಕೊಳ್ಳುವುದು ನಿಷಿದ್ದ ಮಾರ್ಗದಲ್ಲಿ ಆಗಿರುವುದರಿಂದ ಅಲ್ಲಾಹನ ಶಿಕ್ಷೆಯನ್ನು ಗಂಭೀರವಾಗಿ ಭಯಪಡಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದ ಸಯ್ಯಿದ್ ಹುಸೈನ್ ತಂಙಳ್ ಪೋಷಕರು ತಮ್ಮ ಮಕ್ಕಳು ಹಾದಿ ತಪ್ಪಿ ತಮಗೂ, ಸಮಾಜಕ್ಕೂ, ಸಮುದಾಯಕ್ಕೂ, ಧರ್ಮಕ್ಕೂ ಕಂಟಕವಾಗುವ ಬಗ್ಗೆ ಸೂಕ್ಷ್ಮ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸಲಹೆ ನೀಡಿದರು.
ವಿನಯ, ಸೇವೆ ಜೀವನದ ಅಂಗವಾಗಲಿ : ಅಬೂಸ್ವಾಲಿಹ್ ಫೈಝಿ
ಕಾರ್ಯಕ್ರಮ ಉದ್ಘಾಟಿಸಿದ ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ವಿನಯದೊಂದಿಗೆ ಸೇವೆ ನೀಡಿದಾಗ ಬದುಕು ಸಾರ್ಥಕವಾಗುತ್ತದೆ. ಎಸ್ಕೆಎಸ್ಸೆಸ್ಸೆಫ್ ಧ್ಯೇಯ ಕೂಡಾ ಇದೇ ಆಗಿದ್ದು, ಸಮಾಜದಲ್ಲಿ ಉಪಕಾರಿ ಜೀವಿಸಿದಾಗ ವ್ಯಕ್ತಿ ಅತ್ಯಂತ ಶ್ರೇಷ್ಠ ಮನುಷ್ಯನಾಗುತ್ತಾನೆ ಎಂದರು.
ಕೊಲೆ ಆಧಿಕ್ಯ ಲೋಕಾವಸಾನದ ಲಕ್ಷಣ : ಅನ್ವರ್ ಸ್ವಾದಿಕ್ ಮುಸ್ಲಿಯಾರ್
ಮುಖ್ಯ ಭಾಷಣಗೈದ ಸಾಲ್ಮರ ಮರಿಯಮ್ ಹಿಫ್ಲುಲ್ ಕುರ್-ಆನ್ ಹಾಗೂ ದಾರುಲ್ ಹಸನಿಯ್ಯ ಕಾಲೇಜು ಮುದರ್ರಿಸ್ ಅನ್ವರ್ ಸ್ವಾದಿಖ್ ಮುಸ್ಲಿಯಾರ್ ಮಾತನಾಡಿ, ಸಮಾಜದಲ್ಲಿ ಕೊಲೆಗಳು ಅಧಿಕಗೊಂಡಾಗ ಲೋಕಾವಸಾನ ನಿರೀಕ್ಷಿಸಿ ಎಂದು ಕಿವಿ ಮಾತು ಹೇಳಿದರು. ಮಾನವ ತನ್ನ ಜೀವನದ ಗುರಿಯನ್ನೇ ಮರೆತು ಬಿಟ್ಟಿದ್ದು, ಇಹಲೋಕ ಶಾಶ್ವತ ಎಂಬ ಮನೋಭಾವನೆಯ ಜೀವನ ಸಮಾಜದಲ್ಲಿ ಕಂಡು ಬರುತ್ತಿದೆ. ಲೌಕಿಕ ಆಡಂಬರಕ್ಕಾಗಿ ಕೊಲೆ, ರಕ್ತಪಾತ, ಸಂಪತ್ತಿನ ಲೂಟಿ ಅಧಿಕವಾಗುತ್ತಿದೆ. ಇದರಿಂದಲೇ ಸಮಾಜದಲ್ಲಿ ಕ್ಷೋಭೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲ ಪರಿಹಾರ ಭಗವಂತನೆಡೆಗೆ ಮರಳುವುದು ಮಾತ್ರವಾಗಿದೆ. ಈ ನಿಟ್ಟಿನಲ್ಲಿ ಮನುಷ್ಯ ಧಾರ್ಮಿಕ ಚೌಕಟ್ಟಿನಲ್ಲಿ, ಆರಾಧನಾ ಕರ್ಮಗಳಲ್ಲಿ ತಲ್ಲೀನನಾಗುವ ಮೂಲಕ ಭಗವಂತನ ಸಾಮೀಪ್ಯ ಬಯಸಬೇಕಾದ ಅನಿವಾರ್ಯ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕರೆ ನೀಡಿದರು.
ನೊಂದವರ ಪಾಲಿಗೆ ಬೆಳಕಾಗಿ : ಅಬೂಬಕ್ಕರ್ ಸಿದ್ದೀಕ್
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮಾತನಾಡಿ ಸಂಘ-ಸಂಸ್ಥೆಗಳು ಸಮಾಜದಲ್ಲಿ ನೊಂದವರ ಪಾಲಿಗೆ ಬೆಳಕಾಗಬೇಕು. ನೊಂದವರ, ಶೋಷಿತರ, ಮರ್ದಿತರ ಸಹಾಯ-ಸಹಕಾರಕ್ಕೆ ಮುಂದೆ ಬರುವ ಸಂಘ-ಸಂಸ್ಥೆಗಳನ್ನು ಜನ ಬಾಂಧವರು ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ಎಸ್ಕೆಎಸ್ಸೆಸ್ಸೆಫ್ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ ಪಾಣೆಮಂಗಳೂರು, ಉದ್ಯಮಿ ಅಬ್ದುಲ್ ಲತೀಫ್ ಕಾರಾಜೆ ಮೊದಲಾದವರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಮುಹಮ್ಮದ್ ತ್ವಾಯಿಫ್ ಮುಸ್ಲಿಯಾರ್ ಹಾಗೂ ಸಂಗಡಿಗರಿಂದ ಮಜ್ಲಿಸ್ಸುನ್ನೂರ್ ಕಾರ್ಯಕ್ರಮ ನಡೆಯಿತು. ಶಾಖಾ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಮಾಜಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಎನ್.ಬಿ., ಮಾಜಿ ಕೋಶಾಧಿಕಾರಿ ಪಿ.ಬಿ. ಅಹ್ಮದ್ ಹಾಜಿ, ಪ್ರಮುಖರಾದ ಮುಹಮ್ಮದ್ ಶಫೀಕ್, ಬಶೀರ್ ಕೆ4, ಬಶೀರ್ ನಂದಾವರ, ಇಸ್ಹಾಕ್ ಫೇಶನ್‍ವ್ಹೇರ್, ಅಬ್ದುಲ್ ಮಜೀದ್ ದರ್ಕಾಸ್, ರಫೀಕ್ ಇನೋಳಿ, ಮುಹಮ್ಮದ್ ಹನೀಫ್ ಬೋಗೋಡಿ, ಅಬ್ದುಲ್ ಮುತಾಲಿಬ್, ಶಾಫಿ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಝುಬೈರ್ ಯು ಸ್ವಾಗತಿಸಿ, ಖಲೀಲ್ ದಾರಿಮಿ ವಂದಿಸಿದರು. ಅಬ್ದುಲ್ ಅಝೀಝ್ ಪಿ.ಐ. ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment