ಅಬೂಬಕ್ಕರ್ ಸಜಿಪ |
ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಕೊರೋನ ಎಂಬ ಸಾಂಕ್ರಾಮಿಕ ರೋಗ ಇದೀಗ ವಿಷಮಕಾರಿ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಪತ್ತೆ ಹಚ್ಚುವಂತಹ ಪ್ರಯೋಗಾಲಯವಿಲ್ಲದ್ದು ವಿಪರ್ಯಾಸ. ಇದನ್ನು ತಕ್ಷಣ ಮಂಗಳೂರಿನಲ್ಲಿ ತೆರೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಇಲಾಖಾ ನಿಕಟಪೂರ್ವ ಉಪಾಧ್ಯಕ್ಷ ಅಬೂಬಕ್ಕರ್ ಸಜಿಪ ಆಗ್ರಹಿಸಿದ್ದಾರೆ.
ವೈಧ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ನಮ್ಮ ಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯಗಳಿಂದಲೂ ರೋಗಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ 4-5 ವೈದ್ಯಕೀಯ ಕಾಲೇಜುಗಳೂ ಕಾರ್ಯಾಚರಿಸುತ್ತಿವೆ, ಅಲ್ಲದೇ ಆಡಳಿತ ಪಕ್ಷದ 7 ಶಾಸಕರು, ಸಂಸದರು, ಉಸ್ತುವಾರಿ ಸಚಿವರುಗಳು ಇರುವಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಕೋವಿಡ್-19 ಸೋಂಕು ತಗುಲಿದರೆ ಅದನ್ನು ದೃಡಪಡಿಸಬೇಕಾದರೆ ಗಂಟಲಿನ ದ್ರವವನ್ನು ಹಾಸನ ಅಥವಾ ಮೈಸೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ, ಅಲ್ಲಿಂದ ಅದರ ವರದಿ ಬರಲು ಕನಿಷ್ಟ 2-3 ದಿನಗಳು ಬೇಕಾಗುತ್ತದೆ, ಅದೇ ಪ್ರಯೋಗಾಲಯವು ಮಂಗಳೂರಿನಲ್ಲಿದ್ದರೆ ಸೂಕ್ತ ಸಮಯದಲ್ಲಿ ವರದಿಯನ್ನಾದರಿಸಿ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗುತ್ತದೆ.
ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು ಅತ್ಯಂತ ಇತಿಹಾಸ ಪ್ರಸಿಧ್ಧವಾಗಿದ್ದರೂ ಇಲ್ಲಿ ಯಾವುದೇ ಪರೀಕ್ಷೆಗಳನ್ನು ನಡೆಸಬೇಕಾದರೂ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸುವುದು ರೂಡಿಯಾಗಿಬಿಟ್ಟಿದೆ, ಇದರ ಹಿಂದೆ ಕಮಿಷನ್ ದಂಧೆಯ ಬಗ್ಗೆಯೂ ಕೇಳಿಬರುತ್ತಿದೆ. ಈ ಬಗ್ಗೆ ಸರಕಾರವು ಕೂಡಲೇ ಗಮನಹರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗವಾದ ಮಂಗಳೂರಿನಲ್ಲಿ ಸುಸಜ್ಜಿತ ಪ್ರಯೋಗಾಲಯ ಸ್ಥಾಪಿಸವಂತೆ ಅಬೂಬಕ್ಕರ್ ಸಜಿಪ ಆಗ್ರಹಿಸಿದ್ದಾರೆ.
0 comments:
Post a Comment