ಉಡುಪಿ (ಕರಾವಳಿ ಟೈಮ್ಸ್) : ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಎಂಬಲ್ಲಿ ಬೋರ್‍ವೆಲ್ ಕಾಮಗಾರಿ ನಡೆಸುತ್ತಿದ್ದ ವೇಳೆ ಕಾಲ ಬುಡದಲ್ಲಿದ್ದ ಮಣ್ಣು ಕುಸಿದು ಬಿದ್ದ ಪರಿಣಾಮ ಕಾರ್ಮಿಕ ರೋಹಿತ್ ಖಾರ್ವಿ ಎಂಬವರು ಸುಮಾರು 15 ಅಡಿ ಭೂಮಿಯ ಒಳಭಾಗಕ್ಕೆ ಕುಸಿದಿದ್ದು, ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತು ಹೋದ ಘಟನೆ ನಡೆದಿದೆ.
ಬೋರ್‍ವೆಲ್ ಪೈಪಿನ ಸುತ್ತ ಮಣ್ಣು ಕುಸಿದಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರೋಹಿತ್ ಕುತ್ತಿಗೆಯವರೆಗೆ ಮಣ್ಣೊಳಗೆ ಹುದುಗಿ ಹೋಗಿದ್ದಾರೆ. ಎಡಗೈ ಹೂತು ಹೋಗಿದೆ. ಸ್ಥಳದಲ್ಲಿದ್ದ ಸಹ ಕಾರ್ಮಿಕರು ಮೇಲಕ್ಕೆತ್ತಲು ಪ್ರಯತ್ನ ನಡೆಸಿದ್ದಾರೆ. ಆದರೆ ಸಾಧ್ಯವಾಗದೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ವೈದ್ಯರು ಮಣ್ಣು ಮೇಲಕ್ಕೆತ್ತುವ ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜನ ಸ್ಥಳದಲ್ಲಿ ಜಮಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ದೊಡ್ಡ ಪ್ಲಾಸ್ಟಿಕ್ ಡ್ರಮ್ ರೋಹಿತ್ ಖಾರ್ವಿ ಸುತ್ತ ಭೂಮಿಯೊಳಗೆ ಇಳಿಸಿದ್ದಾರೆ. ಸುತ್ತಲ ಮಣ್ಣು ಇನ್ನಷ್ಟು ಕೆಳಗೆ ಕುಸಿಯದಂತೆ ನೋಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಏಣಿಯನ್ನು ಕಟ್ಟಿ ಹಗ್ಗದ ಮೂಲಕ ಹೊಂಡದೊಳಗೆ ಇಳಿದಿದ್ದಾರೆ. ರೋಹಿತ್ ಖಾರ್ವಿ ಉಸಿರಾಟ ನಡೆಸುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದಾನೆ ಎನ್ನಲಾಗಿದೆ. ಸರಕಾರಿ ಆಸ್ಪತ್ರೆಯ ವೈದ್ಯರು ಆಕ್ಸಿಜನ್ ಸಿಲಿಂಡರನ್ನು ಸ್ಥಳಕ್ಕೆ ರವಾನೆ ಮಾಡಿದ್ದು, ಆಮ್ಲಜನಕ ಸರಬರಾಜು ಮಾಡಲಾಗಿದೆ. ಹಸಿ ಮಣ್ಣು ಬಿಗಿದುಕೊಂಡಿದ್ದರಿಂದ ಪಕ್ಕದಲ್ಲಿ ಜೆಸಿಬಿ ಮೂಲಕ ಮತ್ತೊಂದು ಹೊಂಡ ಮಾಡಿ ರೋಹಿತ್ ನನ್ನ ಮೇಲಕ್ಕೆತ್ತುವ ಪ್ರಕ್ರಿಯೆ ಮಾಡಲಾಗುತ್ತಿದೆ. ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾ ಹೂಡಿದ್ದು, ರೋಹಿತ್ ಖಾರ್ವಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ.
0 comments:
Post a Comment