ಬಂಟ್ವಾಳ (ಕರಾವಳಿ ಟೈಮ್ಸ್) : ಅಡಾಲ್ಫ್ ಹಿಟ್ಲರ್ ಆಡಳಿತದ ಜರ್ಮನಿಯಲ್ಲಿ ಜಾರಿಯಲ್ಲಿದ್ದ ಕರಾಳ ಕಾನೂನುಗಳೆಲ್ಲವೂ ಇಂದು ಭಾರತದಲ್ಲಿ ಜಾರಿಯಾಗುತ್ತಿದ್ದು ಇದರ ಹಿಂದೆ ಇಡೀ ಭಾರತವನ್ನೇ ಬ್ರಾಹ್ಮಣ್ಯಶಾಹಿ ವ್ಯವಸ್ಥೆಗೆ ನೂಕುವ ಹುನ್ನಾರ ಅಡಗಿದ್ದು, ಈ ಬಗ್ಗೆ ಈ ದೇಶದ ದಲಿತರು, ಶೂದ್ರರು, ಅಲ್ಪಸಂಖ್ಯಾತರು ಜಾಗೃತರಾಗಬೇಕಾದ ತುರ್ತು ಅನಿವಾರ್ಯತೆ ಇದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯವಾದಿ ಬಾಲನ್ ಕರೆ ನೀಡಿದರು.
ತುಂಬೆ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಇಲ್ಲಿನ ಬಿ ಎ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಎನ್‍ಆರ್‍ಸಿ, ಎನ್‍ಪಿಆರ್ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿಎಎ ಕಾಯ್ದೆಯ ಮೂಲ ಜರ್ಮನಿಯದ್ದಾಗಿದೆ. ಆರ್ಯರನ್ನು ಹೊರತುಪಡಿಸಿ ಉಳಿದ ಸಮುದಾಯಗಳಿಗೆ ಪೌರತ್ವ, ಅಧಿಕಾರ ನೀಡುವುದನ್ನು ನಿರ್ಬಂಧಿಸಿ ಹಿಟ್ಲರ್ ಬರೆದ 25 ಅಂಶಗಳ ಕಾರ್ಯಕ್ರಮವನ್ನೇ ಆರೆಸ್ಸೆಸ್ ಸಂಸ್ಥಾಪಕ ವೀರ ಸಾವರ್ಕರ್ ನಕಲು ಮಾಡಿ ಪುಸ್ತಕ ಬರೆದಿದ್ದಾರೆ. ಅದನ್ನು ಅನುಷ್ಠಾನಗೊಳಿಸುವ ಕೆಲಸ ಇಂದಿನ ಬಿಜೆಪಿ ಮಾಡುತ್ತಿದೆ ಎಂದು ವಿಶ್ಲೇಷಿಸಿದರು.
ಸಿಎಎ ಕೇವಲ ಮುಸ್ಲಿಮರ ವಿರೋಧಿ ಕಾನೂನಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಹಿಂದೂಗಳಿಗೆ ಮಾತ್ರ ಪೌರತ್ವ ನೀಡುವುದರ ಹಿಂದೆಯೂ ಕುತಂತ್ರ ಅಡಗಿದೆ. ಈ ಮೂರು ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರು ಮತ್ತು ಬನಿಯಾಗಳು ಇದ್ದಾರೆ. ಹಾಗಾಗಿ ಈ ದೇಶಗಳ ಹಿಂದೂಗಳಿಗೆ ಮಾತ್ರ ಪೌರತ್ವ ನೀಡಲಾಗುತ್ತಿದೆ. ಅದೇ ರೀತಿ ಶ್ರೀಲಂಕಾ, ಭೂತಾನ್, ಬರ್ಮಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ, ಶೂದ್ರರಾದ ಕೆಳ ಜಾತಿಗೆ ಸೇರಿದ ಹಿಂದೂಗಳಿರುವ ಕಾರಣ ಆ ದೇಶಗಳ ಹಿಂದೂಗಳಿಗೆ ಪೌರತ್ವ ನೀಡಲಾಗುತ್ತಿಲ್ಲ. ಹಾಗಾಗಿ ಸಿಎಎ ಕಾನೂನು ಮುಸ್ಲಿಮರಿಗೆ ಮಾತ್ರವಲ್ಲ ದಲಿತ, ಶೂದ್ರ, ಆದಿವಾಸಿಗಳ ವಿರೋಧಿ ಕಾನೂನಾಗಿದೆ. ಇದು ಬ್ರಾಹ್ಮಣ, ಬನಿಯಾಗಳ ಪರ ಇರುವ ಕಾನೂನಾಗಿದೆ. ಹಾಗಾಗಿ ಇದನ್ನು ಸಮಸ್ತ ಭಾರತೀಯರು ವಿರೋಧಿಸುತ್ತೇವೆ ಎಂದು ಬಾಲನ್ ಹೇಳಿದರು.
ಸಿಎಎ ಜರ್ಮನಿಯಲ್ಲಿ ಹಿಟ್ಲರ್ ಜಾರಿ ಮಾಡಿದ ಪೌರತ್ವದ ಕಾನೂನಿನ ನಕಲಾಗಿದೆ. ಇಂದು ಸಂಘ ಪರಿವಾರ ಹೇಳುತ್ತಿರುವುದು ಪೂರ್ತಿ ಹಿಟ್ಲರಿನ ಸಿದ್ಧಾಂತಗಳನ್ನಾಗಿದೆ. ಆರೆಸ್ಸೆಸ್ ಸಂಸ್ಥಾಪಕ ಸಾವರ್ಕರ್ ಬರೆದ ಪುಸ್ತಕ ಹಿಟ್ಲರ್ ಬರೆದ ಪುಸ್ತಕದ ಕಾಪಿ ಪೇಸ್ಟ್ ಆಗಿದೆ. ಈ ದೇಶದ ಫ್ಯಾಸಿಸ್ಟ್ ಶಕ್ತಿಗಳಿಗೂ ಜರ್ಮನ್ ದೇಶದ ಫ್ಯಾಸಿಸ್ಟ್ ಶಕ್ತಿಗಳಿಗೂ ಇರುವ ಸಂಬಂಧ ಇಲ್ಲಿಂದಲೇ ಆರಂಭವಾಗಿದೆ. ಹಿಟ್ಲರ್ ಜಾರಿಗೆ ತಂದ ಪೌರತ್ವ ಕಾಯ್ದೆ ಪ್ರಕಾರ ಆರ್ಯನರನ್ನು ಹೊರತು ಪಡಿಸಿ ಬೇರೆ ಯಾರಿಗೂ ಪೌರತ್ವ ನೀಡುವುದನ್ನು ನಿಷೇಧಿಸಲಾಗಿತ್ತು. ಹಿಟ್ಲರ್ ಮಾದರಿಯಲ್ಲಿ ಇಂದು ಬಿಜೆಪಿ ಸರಕಾರ ಸಿಎಎ ಮೂಲಕ ಮುಸ್ಲಿಮರು, ದಲಿತರು, ಶೂದ್ರರನ್ನು ಪೌರತ್ವದಿಂದ ಕೈ ಬಿಡಲಾಗಿದೆ. ಯಹೂದಿಯರು, ಕಮ್ಯುನಿಸ್ಟರು, ಚಿಂತಕರು, ಪತ್ರಕರ್ತರು, ಬುದ್ಧಿಜೀವಿಗಳನ್ನು ಸೇರಿ ಒಟ್ಟು 1 ಕೋಟಿ 70 ಲಕ್ಷ ಜನರನ್ನು ಕೊಂದ ಹಿಟ್ಲರಿಗೆ ಸಾವರ್ಕರ್ ಕೃಷ್ಣನ ಅವತಾರ ಎಂಬ ಬಿರುದು ಕೊಟ್ಟಿದ್ದಾರೆ ಎಂದ ಬಾಲನ್ ಹಿಂದೂ ಮತ್ತು ಹಿಂದುತ್ವ ಬೇರೆ ಬೇರೆ ಆಗಿದೆ. ಹಿಂದೂ ಎಂದರೆ ಪೂಜೆ ಪುರಸ್ಕಾರ. ಹಿಂದುತ್ವ ಅಂದರೆ ರಾಜಕೀಯ. ಹಿಂದೂ ಅಂದರೆ ಮೋಕ್ಷಕ್ಕೆ ಹೋಗುವ ದಾರಿ. ಹಿಂದುತ್ವ ಅಂದರೆ ಪಾರ್ಲಿಮೆಂಟ್‍ಗೆ ಹೋಗುವ ದಾರಿ. ಹಿಂದೂ ಅನ್ನುವುದು ನಂಬಿಕೆ. ಹಿಂದುತ್ವ ಅನ್ನುವುದು ಮೋಸ, ವಂಚನೆ, ದ್ರೋಹ. ಹಾಗಾಗಿ ಹಿಂದುತ್ವ ಮಾನವ ವಿರೋಧಿಯಾಗಿದೆ. ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಹಿಂದುತ್ವದ ಕಾನೂನಾಗಿದೆ. ಹಾಗಾಗಿಯೇ ನಾವು ಅದನ್ನು ವಿರೋಧ ಮಾಡುತ್ತೇವೆ ಎಂದರು.
ದೇಶ ಸಂಪೂರ್ಣ ಬ್ಯಾಹ್ಮಣ್ಯಗೊಳಿಸುವ ಕುತಂತ್ರ
140 ವಿದೇಶಿ ರಾಯಭಾರಿಗಳಲ್ಲಿ 140 ಮಂದಿಯೂ ಬ್ರಾಹ್ಮಣರಾಗಿದ್ದಾರೆ. ರಾಷ್ಟ್ರಪತಿಯ 49 ಕಾರ್ಯದರ್ಶಿಗಳಲ್ಲಿ 39 ಬ್ರಾಹ್ಮಣರು. ಉಪ ರಾಷ್ಟ್ರಪತಿಯ 7 ಕಾರ್ಯದರ್ಶಿಗಳಲ್ಲಿ 7 ಮಂದಿಯೂ ಬ್ರಾಹ್ಮಣರು. ಪ್ರಧಾನ ಮಂತ್ರಿಯ 34 ಮಂದಿ ಕಾರ್ಯದರ್ಶಿಗಳಲ್ಲಿ 31 ಮಂದಿ ಬ್ರಾಹ್ಮಣರು ಉಳಿದ 3 ಮಂದಿ ಸಂಘಿಗಳು. ಸುಪ್ರೀಂ ಕೋರ್ಟ್‍ನ 26 ನ್ಯಾಯಮೂರ್ತಿಗಳಲ್ಲಿ 23 ಮಂದಿ ಬ್ರಾಹ್ಮಣರು. ಹೈಕೋರ್ಟ್ 330 ನ್ಯಾಯಮೂರ್ತಿಗಳಲ್ಲಿ 306 ಮಂದಿ ಬ್ರಾಹ್ಮಣರು. 3,600 ಐಎಎಸ್ ಅಧಿಕಾರಿಗಳಲ್ಲಿ 2,750 ಮಂದಿ ಬ್ರಾಹ್ಮಣರು. ಇಷ್ಟೇ ಅಲ್ಲದೆ ಗುಪ್ತಚರ ಇಲಾಖೆಯಾದ ರಾ, ಐಬಿ, ಉನ್ನತ ತನಿಖಾ ಸಂಸ್ಥೆಯಾದ ಸಿಬಿಐ, ಎನ್‍ಐಎ, ಐಟಿ ಹಾಗೂ ಸೈನ್ಯ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪೂರ್ತಿ ಬ್ರಾಹ್ಮಣರ ಕೈಯಲ್ಲಿ ಇದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ದೇಶದ 300 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಬನಿಯಾಗಳಿಗೆ ಮಾರಾಟ ಮಾಡಲಾಗಿದೆ. 2014 ರಲ್ಲಿ 22 ಬಿಲಿಯನ್ ಡಾಲರ್ ಇದ್ದ ಅಂಬಾನಿಯ ಆಸ್ತಿ 2018 ರಲ್ಲಿ 55 ಬಿಲಿಯನ್ ಡಾಲರ್ ಆಗಿದೆ. ಇಡೀ ದೇಶದ ಆಸ್ತಿಯಲ್ಲಿ ಶೇ 6ರಷ್ಟು ಆಸ್ತಿ ಬ್ರಾಹ್ಮಣರು ಮತ್ತು ಬನಿಯಾಗಳ ಕೈಯಲ್ಲಿ ಇದೆ. ಇನ್ನು ದೇಶದ ಪೌರತ್ವ ಅವರಿಗೆ ಮಾತ್ರ ಸೀಮಿತವಾಗಬೇಕೆಂಬ ಕುತಂತ್ರ ನಡೆಯುತ್ತಿದೆ. ಇದು ಫ್ಯಾಸಿಸಂ ಆಗಿದೆ. ಇದರ ವಿರುದ್ಧ ಮೂಲ ನಿವಾಸಿಗಳಾದ ನಾವು ಎಚ್ಚೆತ್ತುಕೊಳ್ಳಬೇಕು ಎಂದು ನ್ಯಾಯವಾದಿ ಬಾಲನ್ ಹೇಳಿದರು.
ತುಂಬೆ ಜುಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಫೈಝಿ ಪ್ರತಿಭಟನಾ ಸಮಾವೇಶ ಉದ್ಘಾಟಿಸಿದರು. ಸಮಸ್ತ ಮುಶಾವರ ಸದಸ್ಯ ಬಿ ಕೆ ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ, ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಸಅದಿ, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಮಾಜಿ ಸಚಿವೆ ಬಿ ಟಿ ಲಲಿತ್ ನಾಯ್ಕ್, ಪಿಎಫ್‍ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಪತ್ರಕರ್ತ ರಾ ಚಿಂತನ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಟಿ ಕೆ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ಮನಪಾ ಮಾಜಿ ಮೇಯರ್ ಕೆ ಅಶ್ರಫ್, ಮಿತ್ತಬೈಲ್ ಖತೀಬ್ ಅಶ್ರಫ್ ಫೈಝಿ, ತುಂಬೆ ಮಸೀದಿ ಅಧ್ಯಕ್ಷ ಇಮ್ತಿಯಾಝ್ ಆಲ್ಫ ಮೊದಲಾದವರು ಉಪಸ್ಥಿತರಿದ್ದರು. ಡಾ ಕೆ ಎಸ್ ಅಮೀರ್ ಅಹ್ಮದ್ ತುಂಬೆ ಸ್ವಾಗತಿಸಿ, ಕಮಾಲ್ ವಳವೂರು ವಂದಿಸಿದರು. ಗೀಲಾನಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment