ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪ ನೇತ್ರಾವತಿ ನದಿ ಕಿನಾರೆಯಲ್ಲಿ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿ ವರ್ಗ ಕಣ್ಣಿದ್ದೂ ಕುರುಡಾಗಿದ್ದಾರೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಂದೇಶ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಂಟ್ವಾಳ ಕಂದಾಯ ಇಲಾಖಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು ಶನಿವಾರ ದಾಳಿ ನಡೆಸಿ ಅಪಾರ ಪ್ರಮಾಣದ ಮರಳಿನ ಸಂಗ್ರಹವನ್ನು ಮುಟ್ಟುಗೋಲು ಹಾಕಿ ಕೊಂಡಿದ್ದಾರೆ.
ಪ್ರಭಾವಿ ರಾಜಕಾರಣಿಗಳ ಪ್ರಭಾವ ಬಳಸಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಇಲ್ಲಿನ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ಹಲವು ಸಮಯಗಳಿಂದಲೂ ನಡೆಯುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರಿಕೊಂಡರೂ ಯಾವುದೇ ಕ್ರಮ ಜರುಗುತ್ತಿರಲಿಲ್ಲ. ರಾಜಕೀಯ ಪ್ರಭಾವ ಅಧಿಕಾರಿಗಳ ಕೈ ಕಟ್ಟಿ ಹಾಕುತ್ತಿತ್ತು ಎಂದು ಆರೋಪಿಸಿರುವ ಸಾರ್ವಜನಿಕರು ಈ ಬಗ್ಗೆ ಪ್ರಶ್ನಿಸುವವರನ್ನು ಮರಳು ಮಾಫಿಯಾ ಮಂದಿ ಬೆದರಿಕೆಯನ್ನೂ ಒಡ್ಡುತ್ತಿದ್ದರು ಎಂದು ದೂರಿದ್ದಾರೆ.
ಶನಿವಾರ ಬಂಟ್ವಾಳ ಕಂದಾಯ ಹಾಗೂ ಗಣಿ ಇಲಾಖಾಧಿಕಾರಿಗಳು ಸಜಿಪದ ಅಕ್ರಮ ಮರಳು ಅಡ್ಡೆಗೆ ಕೊನೆಗೂ ದಾಳಿ ಸಂಘಟಿಸಿದ್ದು, 800 ಮೆಟ್ರಿಕ್ ಟನ್‍ಗೂ ಅಧಿಕ ಮರಳು ಸಂಗ್ರಹವನ್ನು ಮುಟ್ಟಗೋಲು ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮರಳುಗಾರಿಕೆಯ ಧಕ್ಕೆಯಲ್ಲಿ ಮರಳುಗಾರಿಕೆಗೆ ಬಳಸುತ್ತಿದ್ದ ಯಾವುದೇ ಯಂತ್ರಗಳಾಗಲೀ, ಬೋಟ್‍ಗಳಾಗಲೀ ಪತ್ತೆಯಾಗದೆ ಮರಳು ಸಂಗ್ರಹ ಮಾತ್ರ ಪತ್ತೆಯಾಗಿರುವುದು ಅಧಿಕಾರಿಗಳ ದಾಳಿ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ವಶಪಡಿಸಿಕೊಂಡಿರುವ ಮರಳನ್ನು ಕಂದಾಯ ಅಧಿಕಾರಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಮುಂದಿನ ತನಿಖೆ ಯಾವ ಹಂತದಲ್ಲಿ ಸಾಗಲಿದೆ ಎಂಬುದನ್ನೂ ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
0 comments:
Post a Comment