ಬಂಟ್ವಾಳ (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೂಂಜಾಲಕಟ್ಟೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ವಾಪಾಸಾಗುತ್ತಿದ್ದ ಮಹಿಳೆ, ತೆಂಕಕಜೆಕಾರು-ಕಾರ್ಲ ನಿವಾಸಿ ನಿವೃತ್ತ ಸೈನಿಕ ಸದಾನಂದ ಅವರ ಪತ್ನಿ ಇಂದಿರಾ (55) ಅವರು ಮೃತಪಟ್ಟಿದ್ದಾರೆ.
ವೇಣೂರು ಕಾಶಿಪಟ್ನದಲ್ಲಿ ಇಂದಿರಾ ಅವರು ಪತಿ ಸದಾನಂದ ಅವರ ಶಿಫ್ಟ್ ಕಾರಿನಲ್ಲಿ ತನ್ನ ಮಗಳ ಮನೆಯಲ್ಲಿ ನಡೆದ ಮದರಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಬರುತ್ತಿದ್ದ ವೇಳೆ ಪುಂಜಾಲಕಟ್ಟೆ ದೈಕಿನಕಟ್ಟೆ ತಿರುವಿನಲ್ಲಿ ಕಾರು ನಿಯಂತ್ರಣ ಮೀರಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಈ ಅವಘಡ ನಡೆದಿದೆ.
ಅಪಘಾತದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕಾರಿನಲ್ಲಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರಾದರೂ ಗಂಭೀರ ಗಾಯಗೊಂಡಿದ್ದ ಇಂದಿರಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ಪತಿ ಸದಾನಂದ ಅವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೂಂಜಾಲಕಟ್ಟೆ ಎಸ್ಸೈ ಸೌಮ್ಯ ನೇತೃತ್ವದ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment