ಬಂಟ್ವಾಳ (ಕರಾವಳಿ ಟೈಮ್ಸ್) : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವ ಅಭಿವೃದ್ದಿ ಕಾಮಗಾರಿಗಳನ್ನು ರಾಜಕೀಯ ಮರೆತು ಕೈಗೊಳ್ಳಲಾಗಿದೆ ಎಂದು ಮಂಗಳೂರು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.
ಶಾಸಕರ ಮತ್ತು ಗ್ರಾಮ ಪಂಚಾಯತ್‍ನ 16 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಿರುವ ಪುದು ಗ್ರಾಮ ಪಂಚಾಯತಿನ ನೂತನ ಸಭಾಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲು ಸುಸಜ್ಜಿತ ಸಭಾಭವನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿಯಾದ ಸಭಾ ಭವನವನ್ನು ನಿರ್ಮಿಸಿರುವ ಪುದು ಗ್ರಾಮ ಪಂಚಾಯತ್ ಆಡಳಿತ ಈ ಸಭಾಭವನದಲ್ಲಿ ಆರೋಗ್ಯಕರ ಚರ್ಚೆ ನಡೆಸಿ ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ರಸ್ತೆ, ನೀರು, ಶಾಲೆ, ಅಂಗನವಾಡಿ ಸಹಿತ ಗ್ರಾಮಸ್ಥರ ಸಕಲ ಬೇಡಿಕೆಗಳನ್ನು ಈಡೇರಿಸಲಾಗಿದೆ. ಈ ಗ್ರಾಮದ ಪ್ರತೀ ರಸ್ತೆಯು ಕಾಂಕ್ರಿಟ್ ರಸ್ತೆಗಳಾಗಿ ಉತ್ತಮ ಗುಣಮಟ್ಟದಿಂದ ಕೂಡಿದೆ. ಇನ್ನೂ ಈ ಗ್ರಾಮಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಖಾದರ್ ಭರವಸೆ ನೀಡಿದರು.
ಅಭಿವೃದ್ಧಿಯಲ್ಲಿ ಪುದು ಗ್ರಾಮ ಪಂಚಾಯತ್ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಈ ಗ್ರಾಮದ ಪ್ರತೀ ಮನೆಗೆ ದಿನದ ಇಪ್ಪತ್ತ ನಾಲ್ಕು ಗಂಟೆಯೂ ಕುಡಿಯುವ ನೀರು ಪೂರೈಕೆಗೆ ಹೊಸ ಯೋಜನೆಯೊಂದನ್ನು ರೂಪಿಸಲಾಗುವುದು. ಪುದು, ಅಡ್ಯಾರ್, ಮೇರಮಜಲು, ಕೊಡ್ಮಾಣ್‍ಗಳನ್ನು ಸೇರಿಸಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಗ್ರಾಮದ ಪ್ರತಿಯೊಬ್ಬರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗಿದೆ. ಗ್ರಾಮದಲ್ಲಿ ಸರಕಾರಿ ಪಿ.ಯು. ಕಾಲೇಜು ಸ್ಥಾಪನೆಗೆ ಬೇಡಿಕೆ ಇದ್ದು ಈ ಹಿನ್ನೆಲೆಯಲ್ಲಿ ಸುಜೀರು ಪ್ರೌಢಶಾಲೆಯನ್ನು ಪಿ.ಯು. ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಇದು ಈಡೇರಲಿದೆ ಎಂದು ಯು.ಟಿ. ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೆಲ್ಲವೂ ಗ್ರಾಮಸ್ಥರು ನನಗೆ ನೀಡಿರುವ ಆಶೀರ್ವಾದದ ಫಲವಾಗಿದೆ. ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲು ಮುಂದಿನ ದಿನಗಳಲ್ಲೂ ಜನರ ಆಶೀರ್ವಾದ ಬೇಕಾಗಿದೆ ಎಂದು ಕೋರಿದ ಅವರು ಅಭಿವೃದ್ಧಿ ಕಾರ್ಯದಲ್ಲಿ ಎಂದೂ ರಾಜಕೀಯ ಮಾಡಬಾರದು. ರಾಜಕೀಯದಲ್ಲಿ ಎಂದೂ ಜಾತಿ, ಧರ್ಮವನ್ನು ಸೇರಿಸಬಾರದು. ಜಾತಿ, ಧರ್ಮಕ್ಕಿಂತ ದೇಶ ಮುಖ್ಯವಾಗಿದೆ. ನಮಗೆಲ್ಲಾ ಭಾರತ ಒಂದೇ. ಭಾರತೀಯರಾದ ನಾವೆಲ್ಲರೂ ಒಂದೇ. ಇದುವೇ ನಮ್ಮ ಧರ್ಮವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ 25 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ವಿವಿಧ ಫಲಾನುಭವಿಗಳಿಗೆ 62 ಸಿಂಟೆಕ್ಸ್ ಟ್ಯಾಂಕ್, 2 ಟೈಲರಿಂಗ್ ಯಂತ್ರ, 2 ವೀಲ್ ಚೆಯರ್, 4 ಸೋಲರ್ ಲೈಟ್‍ಗಳನ್ನು ಶಾಸಕ ಯು.ಟಿ. ಖಾದರ್ ವಿತರಿಸಿದರು. ಇದೇ ವೇಳೆ ಶಾಸಕ ಯು.ಟಿ. ಖಾದರ್ ಮತ್ತು ಸಭಾಭವನದ ಇಂಜಿನಿಯರ್ ರವಿಚಂದ್ರ, ಗುತ್ತಿಗೆದಾರ ಪಿ.ಎಸ್. ಅಬ್ದುಲ್ ಲತೀಫ್, ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರನ್ನು ಸನ್ಮಾನಿಸಲಾಯಿತು.
ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಭೇಟಿ ನೀಡಿ ಶುಭ ಹಾರೈಸಿದರು. ಪುದು ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೋ ಸುಜೀರು, ಬಂಟ್ವಾಳ ತಾಪಂ ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಪಿಡಿಒ ಪ್ರೇಮಲತಾ, ಕಾರ್ಯದರ್ಶಿ ಅಶ್ವಿನಿ ಬಿ. ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment