ಇಕ್ಕಟ್ಟಿನ ರಸ್ತೆಗಳಲ್ಲಿ ಕುಂಟು ನೆಪವೊಡ್ಡಿ ವಾಹನ ಸವಾರರಿಗೆ ಕಿರಿಕ್ ಆರೋಪ...
ವೈರಲ್ ವೀಡಿಯೋದಲ್ಲಿ ಕಂಡು ಬಂದ ದೃಶ್ಯಗಳು |
ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಟ್ರಾಫಿಕ್ ಪೊಲೀಸರು ಬಿ ಸಿ ರೋಡು-ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿನ ಅಗಲ ಕಿರಿದಾದ ರಸ್ತೆಯಲ್ಲಿ ತಮ್ಮ ಇಂಟರ್ ಸೆಪ್ಟರ್ ವಾಹನ ನಿಲ್ಲಿಸಿ ವಾಹನ ಸವಾರರನ್ನು ಬೇಕಾಬಿಟ್ಟಿ ಅಡ್ಡಗಟ್ಟಿ ದಂಡ ಹಾಕಿದ್ದಲ್ಲದೆ ಸವಾರರನ್ನು ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ ಬಗ್ಗೆ ವಾಹನ ಸವಾರರು ಪೊಲೀಸರನ್ನು ಹಿಗ್ಗಾ ಮುಗ್ಗಾ ತರಾಟೆಗಳೆದ ವೀಡಿಯೋ ತುಣುಕುಗಳು ಸೋಮವಾರ ಸಂಜೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೊಡಂಕಾಪುವಿನ ಇಕ್ಕಟ್ಟಾದ ರಸ್ತೆಯಲ್ಲಿ ಬಂಟ್ವಾಳ ಸಂಚಾರಿ ಠಾಣೆಯ ಅಧಿಕಾರಿ ರಾಮ ನಾಯ್ಕ ಅವರು ಸಿಬ್ಬಂದಿಯೊಂದಿಗೆ ಸೇರಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಶಾಲಾ ಪರಿಸರದಲ್ಲಿ ಅತೀ ವೇಗ ಎಂಬ ಕಾರಣಕ್ಕೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರನ್ನು ತರಾಟೆಗೆಳೆದ ವಾಹನ ಸವಾರರು ಇಲ್ಲಿ ಶಾಲಾ ಪರಿಸರ ಎನ್ನುವುದಕ್ಕೆ ಯಾವುದೇ ನಾಮಫಲಕ ನಿಮ್ಮ ಇಲಾಖೆಯಿಂದ ಅಳವಡಿಸದೆ ಇರುವಾಗ ಅದು ವಾಹನ ಸವಾರರಿಗೆ ಗೊತ್ತಾಗುವುದಾದರೂ ಹೇಗೆ? ಇಲ್ಲಿನ ಕಿರಿದಾದ ರಸ್ತೆಯಲ್ಲಿ 20-40 ಕಿ ಮೀ ವೇಗಕ್ಕಿಂತ ವಾಹನ ಚಲಾಯಿಸುವುದು ಕಷ್ಟ ಸಾಧ್ಯವಿರುವಾಗ ಬೇಕಾಬಿಟ್ಟಿ ನೆಪ ಹೇಳಿ ದಂಡ ವಿಧಿಸುವುದು ಎಷ್ಟು ಸರಿ? ಅಲ್ಲದೆ ವಾಹನ ಸವಾರರೊಂದಿಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅಧಿಕಾರಿ ಸಮ್ಮುಖದಲ್ಲೇ ಏಕ ವಚನದಲ್ಲಿ ನಿಂದಿಸಿ ಮಾತನಾಡುವ ಅಗತ್ಯ ಏನಿದೆ? ಇದು ಸಂಚಾರಿ ಪೊಲೀಸರು ಟ್ರಾಫಿಕೆ ಹೆಸರಿನಲ್ಲಿ ಜನರನ್ನು ಲೂಟುವುದಲ್ಲದೆ ಇನ್ನೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ವಾಹನ ಸವಾರರು ರಸ್ತೆ ಮಧ್ಯದಲ್ಲೇ ಕೇಳುತ್ತಿರುವುದು ವೈರಲ್ ಆಗಿರುವ ವೀಡಿಯೋದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತಿದೆ.
ಇತ್ತೀಚೆಗೆ ಮೆಲ್ಕಾರ್ ಸಮೀಪದ ಇಂತಹದೇ ವಾಹನ ಸವಾರದ ಜೊತೆ ನಡೆಸಿದ ವರ್ತನೆಯ ಪ್ರಕರಣದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಜಿಲ್ಲೆಯಲ್ಲೇ ಸಂಚಲನ ಮೂಡಿತ್ತು. ಈ ಬಗ್ಗೆ ತನಿಖೆಗಾಗಿ ಜಿಲ್ಲಾ ಎಸ್ಪಿ ಅವರು ಬಂಟ್ವಾಳ ಎಎಸ್ಪಿ ಅವರಿಗೆ ಆದೇಶವನ್ನೂ ನೀಡಿದ್ದರು. ಆದರೆ ಪೊಲೀಸ್ ಅಧಿಕಾರಿಗಳ ತನಿಖಾ ವರದಿ ಬಳಿಕ ಅಲ್ಲಿಗೆ ಮುಕ್ತಾಯಗೊಂಡು ಕೆಲ ಸಮಯಕ್ಕೆ ಇಲ್ಲಿನ ಟ್ರಾಫಿಕ್ ಎಎಸ್ಸೈ ಅವರನ್ನು ಇಲ್ಲಿಂದ ವರ್ಗಾವಣೆಗೊಳಿಸಿ ಕೈತೊಳೆಯಲಾಗಿತ್ತು.
ಬಂಟ್ವಾಳ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಣದಂತಹ ಗಂಭೀರ ಸಮಸ್ಯೆಗಳಿಗೆ ಗಮನ ಹರಿಸುವ ಬದಲು ರಸ್ತೆಯಲ್ಲೇ ನಿಂತು ದಂಡ ಹಾಕಿ ವಾಹನ ಸವಾರರ ಪಾಲಿಗೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪ ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಕೇಳಿ ಬರುತ್ತಿದ್ದು, ಇದರಿಂದಾಗಿ ಇಂತಹ ಆವಾಂತರದ ವೀಡಿಯೋಗಳು ಪದೇ ಪದೆ ವೈರಲ್ ಆಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ವಿಚಾರಣೆ
ಟ್ರಾಫಿಕ್ ಪೊಲೀಸರ ಹಾಗೂ ವಾಹನ ಸವಾರರ ನಡುವೆ ನಡೆದ ವಾಗ್ವಾದ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
0 comments:
Post a Comment