ಸಂಗ್ರಹ ಚಿತ್ರ |
ಇಸ್ಮಾಈಲ್ ಝುಹ್ರೀ ರೆಂಗೇಲು, ಗಡಿಯಾರ
ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಜಂಕ್ಷನ್ನಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ರಾಜಕೀಯ ನಾಯಕರ ಇಚ್ಛಾ ಶಕ್ತಿಯಿಂದ ಚತುಷ್ಪತ ರಸ್ತೆ ನಿರ್ಮಾಣ ಗೊಂಡಿತ್ತು. ಇಕ್ಕಾಟ್ಟಾಗಿದ್ದ ಮೆಲ್ಕಾರ್ ಒಂದು ಹಂತದಲ್ಲಿ ವಿಶಾಲತೆಯನ್ನು ಕಂಡಿತ್ತು. ರಸ್ತೆ ಅಗಲೀಕರಣ ಹಾಗೂ ಬಸ್ ನಿಲ್ದಾಣ ನಿರ್ಮಾಣ ಇಲ್ಲಿನ ಜಂಕ್ಷನ್ನಿಗೆ ಸೌಂದರ್ಯವನ್ನು ತಂದುಕೊಟ್ಟಿತ್ತು. ರಸ್ತೆ ಅಗಲೀಕರಣದ ನಂತರ ಇಲ್ಲಿ ರಸ್ತೆ ದಾಟುವ ಜನರಿಗೆ ತುಂಬಾ ಅನಾನುಕೂಲತೆ ಎದುರಾಗಿದೆ. ಮುಡಿಪು, ಮಂಗಳೂರು, ಬೆಂಗಳೂರು ಈ ಮೂರೂ ಮಾರ್ಗಗಳ ಮೂಲಕ ವೇಗವಾಗಿ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್ ತಲುಪುತ್ತಲೇ ಯಾವುದೇ ವೇಗ ನಿಯಂತ್ರಣಕ್ಕೆ ತಂದುಕೊಳ್ಳದೆ ಏಕ ರೂಪದ ವೇಗದಲ್ಲೇ ಸಾಗುತ್ತಿರುವುದರಿಂದ ಇಲ್ಲಿ ರಸ್ತೆ ದಾಟಲು ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಂತೂ ಮೆಲ್ಕಾರ್ ಜಂಕ್ಷನ್ನಿನಲ್ಲಿ ಹೆದ್ದಾರಿ ದಾಟಲು ಬಹಳಷ್ಟು ಸಮಯ ಕಾಯಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಟ್ರಾಫಿಕ್ ನಿಯಂತ್ರಿಸಲು ಕೆಲವೊಮ್ಮೆ ಸಂಚಾರಿ ಪೊಲೀಸ್ ಸಿಬ್ಬಂದಿಗಳು ಇದ್ದರೂ ವಾಹನ ತಪಾಸಣೆ ಬಿಟ್ಟರೆ ಜನರ ಉಪಯೋಗಕ್ಕೆ ಇವರಿಂದ ಯಾವುದೇ ಪ್ರಯತ್ನ ಕಂಡು ಬರುತ್ತಿಲ್ಲ. ಇಲ್ಲಿಂದ ಕೂಗಳತೆ ಅಂತರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇದ್ದರೂ ಮೆಲ್ಕಾರ್ ಜಂಕ್ಷನ್ ಅನುಭವಿಸುತ್ತಿರುವ ಟ್ರಾಫಿಕ್ ಸಂಬಂಧಿ ಸಮಸ್ಯೆಗಳಿಗೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಮೆಲ್ಕಾರ್ ಜಂಕ್ಷನ್ನಿನಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಬವಣೆಗೆ ಕೊನೆ ಹಾಡಬೇಕಾಗಿದೆ.
0 comments:
Post a Comment