ನವದೆಹಲಿ (ಕರಾವಳಿ ಟೈಮ್ಸ್) : ಕೇಂದ್ರಾಡಳಿತ ಪ್ರದೇಶವಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿಯಾಗಿ ಸತತ ಮೂರನೇ ಬಾರಿಗೆ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ (ಇಂದು 16-02-2020) ಪ್ರಮಾಣವಚನ ಸ್ವೀಕರಿಸಿದರು.
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಸಹಸ್ರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರನ್ನು ಸಾಕ್ಷಿಯಾಗಿಸಿ ನಡೆದ ಕಾರ್ಯಕ್ರಮದಲ್ಲಿ ಅರವಿಂದ್ ಕೇಜ್ರಿವಾಲ್ ದಿಲ್ಲಿ ಗದ್ದುಗೆಯನ್ನೇರಿದರು.
ತ್ರಿವರ್ಣ ಧ್ವಜ ಹಾಗೂ ಆಪ್ ಧ್ವಜ ಹಿಡಿದ ಪಕ್ಷದ ಕಾರ್ಯಕರ್ತರ ಸಂಭ್ರಮ ಮೇರೆ ಮೀರಿದ್ದು, ತಮ್ಮ ನೆಚ್ಚಿನ ನಾಯಕನ ಪರ ಘೋಷಣೆಗಳನ್ನು ಮೊಳಗಿಸಿದರು.
ದೆಹಲಿ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದ ಸುಮಾರು 50 ಜನರು ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡರು. ಶಿಕ್ಷಕರು, ಬಸ್ ಮಾರ್ಷಲ್‍ಗಳು, ನೈರ್ಮಲ್ಯ ನೌಕರರು, ಅಗ್ನಿಶಾಮಕ ಸಿಬ್ಬಂದಿಯ ಕುಟುಂಬಸ್ಥರು ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸಹಿತ ಬಿಜೆಪಿಯ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರ-ಭರಾಟೆಯ ನಡುವೆಯೂ ಆಡಳಿತಾವಧಿಯಲ್ಲಿ ನಡೆಸಿದ ಅಭಿವೃದ್ಧಿಪರ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ಬಂದ ಕೇಜ್ರಿವಾಲ್ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿ 62 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಗದ್ದುಗೆಯನ್ನು ಉಳಿಸಿಕೊಂಡಿದ್ದರು.
0 comments:
Post a Comment