ಮಂಗಳೂರು (ಕರಾವಳಿ ಟೈಮ್ಸ್) : ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ “ಪದ್ಮಶ್ರೀ” ಪ್ರಶಸ್ತಿಗೆ ಈ ವರ್ಷ ಪಾತ್ರರಾದ ಹರೇಕಳ ಹಾಜಬ್ಬ ಅವರ ಮನೆಗೆ ಇಂದು ಮಂಗಳೂರಿನ ಮಾಧ್ಯಮ ಮಿತ್ರರೊಂದಿಗೆ ಹೋಗಿದ್ದೆ. ಹೋಗುವಾಗ ಶಾಲೊಂದನ್ನು ಕೊಂಡು ಹೋಗಿ, ಅವರಿಗೆ ಹಾಕಿದೆ. ಆದರೆ, ಅವರು ತಿರುಗಿ ನನಗೇ ಸನ್ಮಾನ ಮಾಡಬೇಕೆ? ಆ ಮುಗ್ಧ, ನಿಷ್ಕಳಂಕ, ಪ್ರಾಮಾಣಿಕ ಸೇವೆಯ ವ್ಯಕ್ತಿಯ ಕೈಯಿಂದ ಸನ್ಮಾನ ಸ್ವೀಕರಿಸುವುದಕ್ಕೂ ಅದೃಷ್ಟ ಬೇಕು.
ಅಂದ ಹಾಗೇ, ಹಾಜಬ್ಬರ ಪದ್ಮಶ್ರೀ ಪ್ರಶಸ್ತಿಯ ಹಿಂದೆ ನನ್ನದೂ ಅಲ್ಪ ಸೇವೆ ಮಾಡಿದ ತೃಪ್ತಿ ಇದೆ. 2015 ರಲ್ಲಿ ಅಂದಿನ ದ.ಕ. ಜಿಲ್ಲಾಧಿಕಾರಿಗಳಾಗಿದ್ದ ಎ.ಬಿ. ಇಬ್ರಾಹಿಂ ಅವರು ಒಂದು ದಿನ ನನ್ನನ್ನು ಕರೆದು, ‘ಹರೇಕಳ ಹಾಜಬ್ಬರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕಿದೆ. ಕೇಂದ್ರ ಸರಕಾರಕ್ಕೆ ಕಳುಹಿಸಲು, ಅವರ ಬಗ್ಗೆ ಮಾಹಿತಿ ಲೇಖನ ಇಂಗ್ಲಿಷ್ ಭಾಷೆಯಲ್ಲಿ ಮಾಡಿಕೊಡಲು ಸೂಚಿಸಿದ್ದರು. ಮತ್ತು ಈ ಸಂಬಂಧ ಕೇಂದ್ರ ಸರಕಾರದ ನಿಯಮಾವಳಿಯ ಪತ್ರವನ್ನು ನನಗೆ ನೀಡಿದ್ದರು.
ಹಾಜಬ್ಬರನ್ನು ಸಾಕಷ್ಟು ಬಲ್ಲ ಪತ್ರಕರ್ತ ಬಾಳೇಪುಣಿಯವರು ಆ ಸಂದರ್ಭ ಬಹಳ ಮಾಹಿತಿ ನೀಡಿದ್ದರು. ಕನ್ನಡ ಪ್ರಭ ವರ್ಷದ ವ್ಯಕ್ತಿಯಾದಾಗ ಬಂದ ಪತ್ರಿಕೆಯಲ್ಲೂ ಸಾಕಷ್ಟು ಮಾಹಿತಿ ದೊರಕಿತು. ಆದರೆ, ನನ್ನ ನಿಜವಾದ ಸಮಸ್ಯೆ ಆರಂಭವಾದದ್ದೇ ಆಗ. ಯಾಕೆಂದರೆ, ಕೇಂದ್ರ ಸರಕಾರದ ಅಂದಿನ ನಿಯಮಾವಳಿ ಪ್ರಕಾರ ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ವ್ಯಕ್ತಿಯ ಮಾಹಿತಿಯು 180 ಶಬ್ದಗಳಿಗೆ ಮೀರಬಾರದು. ನಾನು ಮಾಡಿದ ಲೇಖನ ಸುಮಾರು 1600 ಶಬ್ದಗಳಿಗೆ ಮೀರಿತ್ತು. ಇದನ್ನು 180 ಶಬ್ದಗಳಿಗೆ ಇಳಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ತೋರಿಸಿ, ಎಡಿಟ್ ಮಾಡಿ, ಕೊನೆಗೂ ಹಾಜಬ್ಬರ ಮಾಹಿತಿ 180 ಶಬ್ದಗಳಿಗೆ ಬಂತು. ಇದಕ್ಕಾಗಿ ಸುಮಾರು ಒಂದು ವಾರ ಕಾಲ ತಗುಲಿತ್ತು. ಬಳಿಕ ಜಿಲ್ಲಾಧಿಕಾರಿ ಇಬ್ರಾಹಿಂ ಸರ್ ಗೆ ನೀಡಿದ್ದೆ.
ನಂತರ ಇದು ನನಗೆ ಮರೆತೇ ಹೋಗಿತ್ತು. 2020ರ ಜನವರಿ 25 ರಂದು ಸಂಜೆ ಟಿವಿಯಲ್ಲಿ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಬ್ರೇಕಿಂಗ್ ನ್ಯೂಸ್ ಬಂದಾಗಲೇ ಹಾಜಬ್ಬರ ಸಾಧನೆ ದೇಶದ ಮೂಲೆಗೂ ತಲುಪಿದ್ದು ಗೊತ್ತಾಯಿತು. ಹಳ್ಳಿಯಲ್ಲಿರುವ ಒಬ್ಬ ಅನಕ್ಷರಸ್ಥ ಸಾಮಾನ್ಯ ವ್ಯಕ್ತಿಗೆ ದೇಶದ ಅತ್ಯುನ್ನತ ಪ್ರಶಸ್ತಿಯು ಯಾವುದೇ ಪ್ರಭಾವಗಳಿಲ್ಲದೇ ಹುಡುಕಿಕೊಂಡು ಬಂದಿರುವುದು ನಿಜಕ್ಕೂ ಅಸಾಧಾರಣವಾಗಿದೆ.
ಖಾದರ್ ಷಾ,
ವಾರ್ತಾ ಅಧಿಕಾರಿ
ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆ
0 comments:
Post a Comment